ಮುಂಬಯಿ: “ಇದೊಂದು ಪ್ರಬಲ ತಂಡ. ನಾವೆಲ್ಲ ಜತೆಗೂಡಿ ಕಳೆದ ಅನೇಕ ಸಮಯದಿಂದ ಆಡುತ್ತ ಬಂದಿದ್ದೇವೆ. ಟಿ20 ವಿಶ್ವಕಪ್ ಪಂದ್ಯಾವಳಿಗೆ ನಮ್ಮ ತಂಡ ಸರ್ವವಿಧದಲ್ಲೂ ಸಜ್ಜುಗೊಂಡಿದೆ. ಈ ಸಲ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವುದು ನಮ್ಮೆಲ್ಲರ ಗುರಿ ಆಗಿದೆ’ ಎಂಬುದಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ಭಾರತ ತಂಡ ವಿಶ್ವಕಪ್‌ಗೆ ತೆರಳುವ ಮುನ್ನ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್ ಅಮೋಲ್ ಮುಜುಮ್ದಾರ್, ಆಯ್ಕೆ ಸಮಿತಿ ಅಧ್ಯಕ್ಷೆ ನೀತು ಡೇವಿಡ್ ಕೂಡ ಉಪಸ್ಥಿತರಿದ್ದರು.
ಭಾರತ ಈವರೆಗೆ ಟಿ20 ವಿಶ್ವಕಪ್ ಗೆದ್ದಿಲ್ಲ. 2009ರಲ್ಲಿ ಟಿ20 ವಿಶ್ವಕಪ್ ಮೊದ ಲ್ಗೊಂಡ ಬಳಿಕ ಒಮ್ಮೆಯಷ್ಟೇ ಫೈನಲ್ ತಲುಪಿದೆ. 2020ರ ಈ ಪ್ರಶಸ್ತಿ ಸಮರದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. 2017ರ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಭಾರತ ಪರಾಭವಗೊಂಡಿತ್ತು. ಈ ಎರಡೂ ಸಂದರ್ಭಗಳಲ್ಲಿ ಹರ್ಮನ್‌ಪ್ರೀತ್ ಅವರೇ ನಾಯಕಿಯಾಗಿದ್ದರು. ಕಳೆದ ಏಷ್ಯಾ ಕಪ್ ಫೈನಲ್‌ನಲ್ಲೂ ಭಾರತದ ವನಿತೆಯರಿಗೆ ಅದೃಷ್ಟ ಕೈಕೊಟ್ಟಿತ್ತು.
“ಕಳೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೆವು. ಆದರೆ ಆ ಒಂದು ದಿನದಂದು ಮಾತ್ರ ನಮ್ಮ ಯೋಜನೆಯಂತೆ ಯಾವುದೂ ಸಾಗಲಿಲ್ಲ. ನಾನು 19 ವರ್ಷದಿಂದ ಅದೆಷ್ಟೋ ವಿಶ್ವಕಪ್ ಆಡಿದ್ದೇನೆ. ಈಗಲೂ ಅದೇ ಉತ್ಸಾಹದಲ್ಲಿದ್ದೇನೆ’ ಎಂದು 35 ವರ್ಷದ ಹರ್ಮನ್‌ಪ್ರೀತ್ ಹೇಳಿದರು.
“ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಭಾರೀ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ ನಾವು ಯಾವ ತಂಡವನ್ನೂ ಮಣಿಸಬಲ್ಲೆವು. ಆಸ್ಟ್ರೇಲಿಯಕ್ಕೂ ತಿಳಿದಿದೆ, ತಮ್ಮನ್ನು ಸೋಲಿಸುವುದಿದ್ದರೆ ಭಾರತ ಮಾತ್ರ ಎಂದು…’ ಎಂಬುದಾಗಿ ಹರ್ಮನ್‌ಪ್ರೀತ್ ಅಭಿಪ್ರಾಯಪಟ್ಟರು. ಭಾರತ ತನ್ನ ಮೊದಲ ಪಂದ್ಯವನ್ನು ಅ. 4ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.
ಧ್ಯೇಯಗೀತೆ ಬಿಡುಗಡೆ
ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಧ್ಯೇಯಗೀತೆ ಬಿಡುಗಡೆಗೊಂಡಿದೆ. “ವಾಟ್ ಎವರ್ ಇಟ್ ಟೇಕ್ಸ್…’ ಎನ್ನುವ ಸಾಲಿನೊಂದಿಗೆ ಇದು ಆರಂಭವಾಗುತ್ತದೆ. ಮೈಕಿ ಮೆಕ್‌ಕ್ಲಿಯರಿ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಆಲ್ ಗರ್ಲ್ ಪಾಪ್ ಗ್ರೂಪ್‌ನ “ವಿಶ್’ ತಂಡದವರು ಹಾಡಿದ್ದಾರೆ. ಪಾಪ್ ಶೈಲಿಯ ಈ ಹಾಡು ಈಗಾಗಲೇ ವೈರಲ್ ಆಗಿದೆ. ಇದನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.