Advertisement

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

01:01 AM Jun 13, 2024 | Team Udayavani |

ನ್ಯೂಯಾರ್ಕ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಬುಧವಾರ ನಡೆದ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಅಮೆರಿಕ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸೂಪರ್‌ 8 ಹಂತಕ್ಕೇರಿತು.

Advertisement

ಅರ್ಷದೀಪ್‌ ಅವರ ಜೀವನಶ್ರೇಷ್ಠ 9 ರನ್ನಿಗೆ 4 ವಿಕೆಟ್‌ ಸಾಧನೆಯಿಂದ ಅಮೆರಿಕವನ್ನು 8 ವಿಕೆಟಿಗೆ 110 ರನ್ನಿಗೆ ನಿಯಂತ್ರಿಸಿದ ಭಾರತ ತಂಡವು ಆಬಳಿಕ ಸೂರ್ಯಕುಮಾರ್‌ ಯಾದವ್‌ ಅವರ ಅಜೇಯ ಅರ್ಧಶತಕದಿಂದಾಗಿ 18.2 ಓವರ್‌ಗಳಲ್ಲಿ ಮೂರು ವಿಕೆಟಿಗೆ 111 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಇದು ಈ ಕೂಟದಲ್ಲಿ ಭಾರತ ಸಾಧಿಸಿದ ಮೂರನೇ ಗೆಲುವು ಆಗಿದೆ. ಈ ಸಾಧನೆಯಿಂದ ಭಾರತ “ಎ’ ಬಣದಲ್ಲಿ ಆರಂಕದೊಂದಿಗೆ ಅಗ್ರಸ್ಥಾನಕ್ಕೇರಿತಲ್ಲದೇ ಸೂಪರ್‌ 8ಕ್ಕೆ ಪ್ರವೇಶ ಪಡೆಯಿತು. ನಾಲ್ಕಂಕ ಹೊಂದಿರುವ ಅಮೆರಿಕ ದ್ವಿತೀಯ ಸ್ಥಾನದಲ್ಲಿದೆ.

ನಾಯಕ ರೋಹಿತ್‌ ಮತ್ತು ವಿರಾಟ್‌ ಕೊಹ್ಲಿ ಅವರು ಬೇಗನೇ ಔಟಾದರೂ ಸೂರ್ಯಕುಮಾರ್‌ ಮತ್ತು ಶಿವಂ ದುಬೆ ಅವರು ಮುರಿಯದ ನಾಲ್ಕನೇ ವಿಕೆಟಿಗೆ 67 ರನ್‌ ಪೇರಿಸುವ ಮೂಲಕ ಭಾರತ ಸುಲಭ ಗೆಲುವು ದಾಖಲಿಸಿತು.

ಸೂರ್ಯಕುಮಾರ್‌ 49 ಎಸೆತಗಳಿಂದ 50 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

ಅರ್ಷದೀಪ್‌ ಜೀವನಶ್ರೇಷ್ಠ ಸಾಧನೆ
ಎಡಗೈ ಮಧ್ಯಮ ವೇಗಿ ಅರ್ಷದೀಪ್‌ ಭಾರತದ ಪಾಲಿಗೆ “ಹರ್ಷ ದೀಪ್‌’ ಆದರು. ಕೇವಲ 9 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉಡಾಯಿಸಿದ ಸಾಹಸ ಇವರದಾಗಿತ್ತು (4-0-9-4). ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಬೌಲರ್‌ನ ಅತ್ಯುತ್ತಮ ಸಾಧನೆಯಾಗಿದೆ. ಇದರಿಂದಾಗಿ ಅಮೆರಿಕ 8 ವಿಕೆಟಿಗೆ 110 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಅರ್ಷದೀಪ್‌ ಅವಳಿ ಆಘಾತ
ನಾಯಕ ರೋಹಿತ್‌ ಶರ್ಮ ಅವರ ಬೌಲಿಂಗ್‌ ನಿರ್ಧಾರವನ್ನು ಅರ್ಷದೀಪ್‌ ಆರಂಭದ ಓವರ್‌ನಲ್ಲೇ ಯಶಸ್ವಿಗೊಳಿಸಿದರು. ಯುಎಸ್‌ ಅವಳಿ ಆಘಾತಕ್ಕೆ ಸಿಲುಕಿತು. ಪ್ರಥಮ ಎಸೆತದಲ್ಲಿ ಶಯಾನ್‌ ಜಹಾಂಗೀರ್‌ ಲೆಗ್‌ ಬಿಫೋರ್‌ ಆದರೆ, ಅಂತಿಮ ಎಸೆತದಲ್ಲಿ ಕೀಪರ್‌ ಆ್ಯಂಡ್ರೀಸ್‌ ಗೌಸ್‌ (2) ಪಾಂಡ್ಯ ಅವರಿಗೆ ಕ್ಯಾಚ್‌ ಕೊಟ್ಟರು.
ಅರ್ಷದೀಪ್‌ ಟಿ20 ವಿಶ್ವಕಪ್‌ ಪಂದ್ಯ ವೊಂದರ ಮೊದಲ ಎಸೆತದಲ್ಲೇ ವಿಕೆಟ್‌ ಉರುಳಿಸಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ಬೌಲರ್‌. ಉಳಿದವರೆಂದರೆ ಬಾಂಗ್ಲಾದ ಮಶ್ರಫೆ ಮೊರ್ತಜ, ಅಫ್ಘಾನ್‌ ಶಪೂರ್‌ ಜದ್ರಾನ್‌ ಮತ್ತು ನಮೀಬಿಯಾದ ರುಬೆನ್‌ ಟ್ರಂಪ್‌Éಮ್ಯಾನ್‌ (2 ಸಲ).

ಅಮೆರಿಕದ ಪವರ್‌ ಪ್ಲೇ ಸ್ಕೋರ್‌ 2ಕ್ಕೆ 25 ರನ್‌. ಅಪಾಯಕಾರಿ ಆರನ್‌ ಜೋನ್ಸ್‌ 22 ಎಸೆತಗಳಿಂದ 11 ರನ್ನಿಗೆ ಸೀಮಿತಗೊಂಡರು. 10 ಓವರ್‌ ಅಂತ್ಯಕ್ಕೆ ಅಮೆರಿಕ 3ಕ್ಕೆ 42 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಅಮೆರಿಕ-8ಕ್ಕೆ 110 (ನಿತೀಶ್‌ ಕುಮಾರ್‌ 27, ಸ್ಟೀವನ್‌ ಟೇಲರ್‌ 24, ಆ್ಯಂಡರ್ಸನ್‌ 14, ಶಾಡ್ಲಿ ಔಟಾಗದೆ 11, ಜೋನ್ಸ್‌ 11, ಹರ್ಮೀತ್‌ 10, ಅರ್ಷದೀಪ್‌ 9ಕ್ಕೆ 4, ಪಾಂಡ್ಯ 14ಕ್ಕೆ 2, ಅಕ್ಷರ್‌ 24ಕ್ಕೆ 1). ಭಾರತ 18.2 ಓವರ್‌ಗಳಲ್ಲಿ 3 ವಿಕೆಟಿಗೆ 111 (ರಿಷಭ್‌ ಪಂತ್‌ 18, ಸೂರ್ಯಕುಮಾರ್‌ ಯಾದವ್‌ 50 ಔಟಾಗದೆ, ಶಿವಂ ದುಬೆ 31 ಔಟಾಗದೆ).

Advertisement

Udayavani is now on Telegram. Click here to join our channel and stay updated with the latest news.

Next