ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40 ಸಾವಿರಕ್ಕಿಂತ ಅಧಿಕ ಕೋವಿಡ್ 19 ನೂತನ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಜುಲೈ 31) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿಗೆ “ಸಿಡಿ’ ಸಂಕಟ : ಶಾಸಕರಿಗೆ ಆತಂಕ; ಕೋರ್ಟ್ ಮೊರೆ ಹೋದ ರೇಣುಕಾಚಾರ್ಯ
ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41,649 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ಜುಲೈ 27ರಂದು ಭಾರತದಲ್ಲಿ 30,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದು ಕಳೆದ 132 ದಿನಗಳ ಬಳಿಕದ ಕಡಿಮೆ ಪ್ರಮಾಣದ ಪ್ರಕರಣವಾಗಿತ್ತು. ಆದರೆ ಜುಲೈ 28ರಂದು 43,654 ಪ್ರಕರಣ ಪತ್ತೆಯಾಗಿತ್ತು. ನಂತರ ಜುಲೈ 29ರಂದು 43,509 ಪ್ರಕರಣ, ಜುಲೈ 30ರಂದು 44,230 ಪ್ರಕರಣ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ಕೋವಿಡ್ ಸೋಂಕಿನಿಂದ ಕಳೆದ 24ಗಂಟೆಗಳಲ್ಲಿ 593 ಮಂದಿ ಸಾವನ್ನಪ್ಪಿದ್ದು, 37,291 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 3,16,13,993ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,23,810ಕ್ಕೆ ಹೆಚ್ಚಳವಾಗಿದೆ.
ದೇಶದಲ್ಲೀಗ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,08,920ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ವಾರದ ಪಾಸಿಟಿವಿಟಿ ದರ ಶೇ.2.42ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಶೇ.2.34ರಷ್ಟಿದೆ ಎಂದು ತಿಳಿಸಿದೆ.