Advertisement

ಪಿಒಕೆಗೆ ಅಮೆರಿಕ ರಾಯಭಾರಿ ಭೇಟಿ ಏಕೆ? ಕೇಂದ್ರ ಸರ್ಕಾರ ಕಟು ಆಕ್ಷೇಪ

08:50 PM Oct 07, 2022 | Team Udayavani |

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್‌ ಬ್ಲೋಮ್‌ ಭೇಟಿ ನೀಡಿದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಜತೆಗೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು “ಅಜಾದ್‌ ಜಮ್ಮು ಮತ್ತು ಕಾಶ್ಮೀರ’ ಎಂದು ಅಮೆರಿಕ ರಾಯಭಾರಿ ಕರೆದಿರುವ ಬಗ್ಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಈ ಬಗ್ಗೆ ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ, ರಾಯಭಾರಿ ಬ್ಲೋಮ್‌ ಅವರು, ಪಿಒಕೆಗೆ ಭೇಟಿ ನೀಡಿರುವ ಬಗ್ಗೆ ನಮ್ಮ ಅಕ್ಷೇಪಣೆಗಳಿವೆ. ಅವರು ಅಲ್ಲಿನ ನಾಯಕರ ಜತೆಗೆ ಮಾತುಕತೆ ನಡೆಸಿದ್ದೂ ಸಮರ್ಥನೀಯ ಅಲ್ಲ. ಭಾರತ ಸರ್ಕಾರದ ಅಭಿಪ್ರಾಯವನ್ನು ಅಮೆರಿಕ ಸರ್ಕಾರಕ್ಕೆ ತಿಳಿಸಿದ್ದೇವೆ’ ಎಂದು ಹೇಳಿದ್ದಾರೆ.

2005ರ ಭೂಕಂಪದಲ್ಲಿ ಮಡಿದವರ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ವಿಶ್ವವಿದ್ಯಾಲಯವೊಂದರಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್‌ ಸೋಮವಾರ ಪಿಒಕೆಗೆ ಭೇಟಿ ನೀಡಿದ್ದರು. ಇದೇ ವೇಳೆ ಅವರು ಮುಜಫ‌ರಾಬಾದ್‌ನ ಕೆಲವು ಪ್ರಮುಖ ಸ್ಥಳಗಳಿಗೂ ಭೇಟಿ ನೀಡಿದ್ದರು.

ನಿರ್ದಿಷ್ಟ ನಿರ್ಣಯಗಳಿಗೆ ಇಲ್ಲ ಬೆಂಬಲ:
ಇದೇ ವೇಳೆ, ವಿಶ್ವಸಂಸ್ಥೆಯಲ್ಲಿ ಚೀನದ ಕ್ಸಿನ್‌ಜಿನಾಂಗ್‌ ಪ್ರಾಂತ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮತದಾನದಿಂದ ಗೈರು ಹಾಜರಾಗಿರುವ ಬಗ್ಗೆ ಬಗಚಿ ಸಮರ್ಥನೆ ನೀಡಿದ್ದಾರೆ. ನಿಗದಿತ ದೇಶವನ್ನು ಅನುಸರಿಸಿ ಮಂಡಿಸಲಾಗುವ ನಿರ್ಣಯಗಳನ್ನು ಭಾರತ ಯಾವತ್ತೂ ಬೆಂಬಲಿಸುವುದಿಲ್ಲ. ಆದರೆ, ಕ್ಸಿನ್‌ಜಿನಾಂಗ್‌ ಪ್ರಾಂತ್ಯದಲ್ಲಿನ ಮಾನವ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕಾಗಿದೆ ಎಂದು ಬಗಚಿ ಹೇಳಿದ್ದಾರೆ. ಅಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಚೀನದಿಂದ ಕ್ಸಿನ್‌ಜಿಯಾಂಗ್‌  ಪ್ರಾಂತ್ಯದ ನಾಗರಿಕರ ಮೇಲೆ ದೌರ್ಜನ್ಯ, ದಬ್ಟಾಳಿಕೆ ಖಂಡಿಸಿ, ಅಲ್ಲಿನ ಜನರ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಧ್ವನಿ ಎತ್ತಿದೆ.

Advertisement

6 ಮಂದಿ ಸಾವು:
ಇದೇ ವೇಳೆ, ಒಂಭತ್ತು ತಿಂಗಳ ಅವಧಿಯಲ್ಲಿ ಪಾಕಿಸ್ತಾನದ ಜೈಲುಗಳಲ್ಲಿ ಆರು ಮಂದಿ ಭಾರತೀಯರು ಅಸುನೀಗಿದ್ದಾರೆ ಎಂದು ಬಗಚಿ ಹೇಳಿದ್ದಾರೆ. ಈ ಪೈಕಿ ಐವರು ಮೀನುಗಾರರು ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾದ ಜೈಲುಗಳಲ್ಲಿ ಭಾರತೀಯ ಪ್ರಜೆಗಳು ಹೆಚ್ಚಿನ ಪ್ರಮಾಣದಲ್ಲಿ ಅಸುನೀಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next