Advertisement

ಬಾಂಗ್ಲಾ  ವಿರುದ್ಧವೂ ಸೋಲು; ಭಾರತ ಔಟ್‌

08:18 AM Nov 15, 2017 | |

ಕೌಲಾಲಂಪುರ: ಭಾರತ ತಂಡ ಅಂಡರ್‌-19 ಏಶ್ಯಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ. ಬಾಂಗ್ಲಾ ದೇಶ ವಿರುದ್ಧ ಮಂಗಳವಾರ ನಡೆದ “ಎ’ ವಿಭಾಗದ ಅಂತಿಮ ಲೀಗ್‌ ಪಂದ್ಯದಲ್ಲಿ 8 ವಿಕೆಟ್‌ ಅಂತರದ ಆಘಾತಕಾರಿ ಸೋಲನುಭವಿಸುವ ಮೂಲಕ ಭಾರತದ ಕಿರಿಯರು ದೇಶದ ಕ್ರಿಕೆಟ್‌ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿದರು.

Advertisement

ಇದು ಭಾರತಕ್ಕೆ ಎದುರಾದ ಸತತ 2ನೇ ಸೋಲು. ಇದಕ್ಕೂ ಮೊದಲು ನೇಪಾಲ ವಿರುದ್ಧ 19 ರನ್ನುಗಳಿಂದ ಎಡವಿ ತನ್ನ ನಾಕೌಟ್‌ ಹಾದಿಯನ್ನು ದುರ್ಗಮಗೊಳಿ ಸಿತ್ತು. ಬಾಂಗ್ಲಾ ವಿರುದ್ಧ ಗೆದ್ದರಷ್ಟೇ ಹಿಮಾಂಶು ರಾಣ ಬಳಗಕ್ಕೆ ಸೆಮಿಫೈನಲ್‌ ಟಿಕೆಟ್‌ ಲಭಿಸುತ್ತಿತ್ತು. ಆದರೆ ಈ ಅವಕಾಶವನ್ನು ಭಾರತೀಯರು ಕೈಚೆಲ್ಲಿದರು. ಮಲೇಶ್ಯವನ್ನು 202 ರನ್ನುಗಳಿಂದ ಮಣಿಸಿದ್ದಷ್ಟೇ ಭಾರತದ ಸಾಧನೆ.

ಬಾಂಗ್ಲಾದೇಶ ಎಲ್ಲ 3 ಪಂದ್ಯಗಳನ್ನು ಗೆದ್ದು “ಎ’ ವಿಭಾಗದ ಅಗ್ರಸ್ಥಾನಿಯಾಗಿ ಸೆಮಿಫೈನಲಿಗೆ ಲಗ್ಗೆ ಇರಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಮಲೇಶ್ಯವನ್ನು 8 ವಿಕೆಟ್‌ಗಳಿಂದ ಸೋಲಿಸಿದ ನೇಪಾಲ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿತು. “ಬಿ’ ವಿಭಾಗದಲ್ಲಿ ಉತ್ತಮ ರನ್‌ಧಾರಣೆ ಹೊಂದಿದ ಆಫ್ಘಾನಿಸ್ಥಾನ ಮತ್ತು ಪಾಕಿಸ್ಥಾನಕ್ಕೆ ಸೆಮಿಫೈನಲ್‌ ಬಾಗಿಲು ತೆರೆಯಲ್ಪಟ್ಟಿತು (ತಲಾ 4 ಅಂಕ). ಶ್ರೀಲಂಕಾ ಕೂಡ 4 ಅಂಕ ಪಡೆಯಿತಾದರೂ ರನ್‌ರೇಟ್‌ನಲ್ಲಿ ಹಿಂದುಳಿಯಿತು.

32 ಓವರ್‌ ಪಂದ್ಯ
ಮಳೆಯಿಂದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯ ವನ್ನು 32 ಓವರ್‌ಗಳಿಗೆ ಇಳಿಸಲಾಗಿತ್ತು. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 8 ವಿಕೆಟಿಗೆ 187 ರನ್‌ ಪೇರಿಸಿತು. ಆದರೆ ಬೌಲರ್‌ಗಳಿಂದ ಬಾಂಗ್ಲಾ ಆರ್ಭಟವನ್ನು ನಿಯಂತ್ರಿಸಲಾಗಲಿಲ್ಲ. 28 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 191 ರನ್‌ ಬಾರಿಸುವ ಮೂಲಕ ಪರಾಕ್ರಮ ಮೆರೆಯಿತು.

ಪಿನಾಕ್‌ ಘೋಷ್‌-ನೈಮ್‌ ಶೇಖ್‌ ಅವರ ಅಮೋಘ ಆರಂಭ ಬಾಂಗ್ಲಾ ಹಾದಿಯನ್ನು ಸುಗಮಗೊಳಿಸಿತು. ಭಾರತದ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಇವರು 13.1 ಓವರ್‌ಗಳಿಂದ 82 ರನ್‌ ಪೇರಿಸಿದರು. ನಾಯಕ ಸೈಫ್ ಹಸನ್‌ (16) ಬೇಗನೇ ಔಟಾದರೂ ತೌಹಿದ್‌ ಹೃದಯ್‌ ಕ್ರೀಸ್‌ ಆಕ್ರಮಿಸಿಕೊಂಡರು. ಘೋಷ್‌-ತೌಹಿದ್‌ ಅವರಿಂದ ಮುರಿಯದ 3ನೇ ವಿಕೆಟಿಗೆ 83 ರನ್‌ ಒಟ್ಟುಗೂಡಿತು.

Advertisement

ಪಿನಾಕ್‌ ಘೋಷ್‌ ಆಕ್ರಮಣಕಾರಿ ಆಟವಾಡಿ 77 ಎಸೆತಗಳಿಂದ ಅಜೇಯ 81 ರನ್‌ ಬಾರಿಸಿದರು (6 ಬೌಂಡರಿ, 3 ಸಿಕ್ಸರ್‌). ನೈಮ್‌ ಶೇಖ್‌ 44 ಎಸೆತಗಳಿಂದ 38 ರನ್‌ ಮಾಡಿದರೆ (3 ಬೌಂಡರಿ, 2 ಸಿಕ್ಸರ್‌), ತೌಹಿದ್‌ 32 ಎಸೆತಗಳಿಂದ ಅಜೇಯ 48 ರನ್‌ ಹೊಡೆದರು (2 ಬೌಂಡರಿ, 4 ಸಿಕ್ಸರ್‌). ಎರಡೂ ವಿಕೆಟ್‌ ಮನ್‌ದೀಪ್‌ ಸಿಂಗ್‌ ಪಾಲಾದವು. ಭಾರತದ ಪರ ಅಜೇಯ 39 ರನ್‌ ಮಾಡಿದ ಕೆಳ ಕ್ರಮಾಂಕದ ಆಟಗಾರ ಸಲ್ಮಾನ್‌ ಖಾನ್‌ ಅವರದೇ ಸರ್ವಾಧಿಕ ಗಳಿಕೆ (38 ಎಸೆತ, 2 ಬೌಂಡರಿ). ಕೀಪರ್‌ ಅನುಜ್‌ ರಾವತ್‌ 34, ಹಾರ್ವಿಕ್‌ ದೇಸಾಯಿ 21 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-32 ಓವರ್‌ಗಳಲ್ಲಿ 8 ವಿಕೆಟಿಗೆ 187 (ಸಲ್ಮಾನ್‌ ಔಟಾಗದೆ 39, ರಾವತ್‌ 34, ಹಾರ್ವಿಕ್‌ 21, ಪರಾಗ್‌ 19, ಶಿವ ಸಿಂಗ್‌ 17, ರಾಣ 15, ರೊಬಿಯುಲ್‌ ಹಕ್‌ 43ಕ್ಕೆ 3, ನಯೀಮ್‌ ಹಸನ್‌ 38ಕ್ಕೆ 2, ಅಫಿಫ್ ಹೊಸೇನ್‌ 38ಕ್ಕೆ 2). ಬಾಂಗ್ಲಾದೇಶ-28 ಓವರ್‌ಗಳಲ್ಲಿ 2 ವಿಕೆಟಿಗೆ 191 (ಘೋಷ್‌ ಔಟಾಗದೆ 81, ತೌಹಿದ್‌ ಔಟಾಗದೆ 48, ನೈಮ್‌ 38, ಮನ್‌ದೀಪ್‌ 36ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next