ಹೊಸದಿಲ್ಲಿ: ಸದ್ಯ ಸಾಗುತ್ತಿರುವ “ಇಂಡಿಯಾ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ 8 ಸಿಂಗಲ್ಸ್ ಆಟಗಾರರು, 10 ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿವೆ. ಮಂಗಳವಾರ ನಡೆದ ಪಂದ್ಯಗಳಲ್ಲಿ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 3ನೇ ಶ್ರೇಯಾಂಕದ ರಾಹುಲ್ ಯಾದವ್ ಚಿಟ್ಟಬಿನಾ ಮತ್ತು 4ನೇ ಶ್ರೇಯಾಂಕಿತ ಸಿದ್ದಾರ್ಥ್ ಠಾಕೂರ್ ಕಾರ್ತಿಕ್ ಜಿಂದಾಲ್ ಪ್ರದಾನ ಸುತ್ತಿಗೆ ಮುನ್ನಡೆದರೆ, ಪ್ರಣವ್ ಜೆರ್ರಿ ಜೋಪ್ರಾ- ಶಿವಂ ಶರ್ಮ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಕಾಲಿಟ್ಟಿದ್ದಾರೆ.
ಕಾರ್ತಿಕ್ ಜಿಂದಾಲ್ ಅರ್ಹತಾ ಸುತ್ತಿನ ಎರಡು ಪಂದ್ಯಗಳಲ್ಲಿ ಪಾವೆಲ್ ಕೊಟ್ಟಾರೆಂಕಾ ಮತ್ತು ಭಾರತದವರೇ ಆದ ಶರತ್ ಡುನ್ನಾ ಸೋಲಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದರು. ಮೊದಲ ಪಂದ್ಯದಲ್ಲಿ ಅವರು 7ನೇ ಶ್ರೇಯಾಂಕಿತ ಥಾಯ್ಲೆಂಡ್‌ನ ಖೋಸಿಟ್ ಫೆಟ್ರಾಡಾಬ್ ಅವರನ್ನು ಎದುರಿಸಲಿದ್ದಾರೆ.
ರಾಹುಲ್ ಯಾದವ್ ಚಿಟ್ಟಬಿನಾ ಭಾರತ ದವರೇ ಆದ ಅನಂತ್ ಶಿವಂ ಜಿಂದಾಲ್ ಅವರನ್ನು ಅರ್ಹತಾ ಸುತ್ತಿನಲ್ಲಿ 21-14, 21-15 ಗೇಮ್‌ಗಳಿಂದ ಸೋಲಿಸಿದ್ದಾರೆ. ಇದಕ್ಕೂ ಮುನ್ನ ಗುರುಪ್ರತಾಪ್ ಸಿಂಗ್ ಧಾಲಿವಾಲ್ ವಿರುದ್ಧ 21-6, 21-13 ಗೇಮ್‌ಗಳಿಂದ ಜಯಿಸಿದ್ದರು.
ವನಿತಾ ಸಿಂಗಲ್ಸ್‌ನಲ್ಲಿ ರಿತಿಕಾ ಠಾಕೂರ್, ಪ್ರಾಶಿ ಜೋಶಿ, ರಿಯಾ ಮುಖರ್ಜಿ ಮತ್ತು ವೈದೇಹಿ ಚೌಧರಿ ಅವರು ಮುನ್ನಡೆದಿದ್ದಾರೆ. ರಿತಿಕಾ ಮೊದಲ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಮಿಯಾ ಬ್ಲಿಚೆಲ್ಟ್ ಅವರನ್ನು ಎದುರಿಸಲಿದ್ದಾರೆ. ಪ್ರಾಶಿ ಜೋಶಿ ಮತ್ತು ವೈದೇಹಿ ಕ್ರಮವಾಗಿ 3ನೇ ಶ್ರೇಯಾಂಕಿತೆ ಹೀ ಬಿಂಗಿjಯೊ ಮತ್ತು 7ನೇ ಶ್ರೇಯಾಂಕಿತೆ ಹಾನ್ ಯೂ ಅವರ ವಿರುದ್ಧ ಆಡಲಿದ್ದಾರೆ.
ಮಿಕ್ಸೆಡ್ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್-ಮೊಹಮ್ಮದ್ ಮೌನಿಸ್ ಹಾಂಕಾಂಗ್‌ನ ತಾಂಗ್ ಚಾನ್ ಮನ್-ನಗ್ ತ್ಸು ಯಾ ವಿರುದ್ಧ ಪರಾಭವಗೊಂಡರು. ಈ ಕೂಟದ ಪ್ರಧಾನ ಸುತ್ತು ಬುಧವಾರದಿಂದ ಆರಂಭವಾಗಲಿದ್ದು, 2017ರ ಚಾಂಪಿಯನ್ ಪಿ.ವಿ. ಸಿಂಧು, 2015ರ ಚಾಂಪಿಯನ್ ಕೆ. ಶ್ರೀಕಾಂತ್ ಹಾಗೂ 5ನೇ ಶ್ರೇಯಾಂಕ ಸಮೀರ್ ವರ್ಮ ತಮ್ಮ ಆಟವನ್ನು ಆರಂಭಿಸಲಿದ್ದಾರೆ.
ಚೋಪ್ರಾ- ಶರ್ಮಗೆ ಮುನ್ನಡೆ
ಪ್ರಣವ್ ಜೆರ್ರಿ ಜೋಪ್ರಾ-ಶಿವಂ ಶರ್ಮ ಜೋಡಿ ಪುರುಷರ ಡಬಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದವರೇ ಆದ ವಿಕಾಸ್ ಚೌಹಾಣ್-ಸಂದೀಪ್ ಚೌದುರಿ ಜೋಡಿಯನ್ನು ಕೇವಲ 19 ನಿಮಿಷಗಳ ಆಟದಲ್ಲಿ 21-10, 21-5 ಗೇಮ್‌ಗಳಿಂದ ಸೋಲಿಸಿದೆ. ವನಿತಾ ಡಬಲ್ಸ್ ವಿಭಾಗದಲ್ಲಿ ಮೇಘಾ ಮೊರ್ಚಾನ ಬೋರಾ-ಮಾನಲಿ ಸಿನ್ಹಾ ಭಾರತದವರೇ ಆದ ಅನಾಮಿಕ ಕಶ್ಯಪ್-ಸಂಗಾಮಿತ್ರ ಸಾಯಿಕಿಯಾ ಜೋಡಿಯನ್ನು 24-22, 21-13 ಗೇಮ್‌ಗಳಿಂದ ಸೋಲಿಸಿದರು.