Advertisement

ಅಡುಗೆ ಎಣ್ಣೆ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗಬೇಕಾಗಿದೆ: ಶೋಭಾ ಕರಂದ್ಲಾಜೆ

06:13 PM Jun 27, 2022 | Team Udayavani |

ಬೆಂಗಳೂರು: ಭಾರತೀಯ ಹೈನುಗಾರಿಕಾ ಅಭಿವೃದ್ದಿ ಮಂಡಳಿ (ಎನ್‌ಡಿಬಿ) ಅಡುಗೆ ಎಣ್ಣೆ ಬೀಜ ಉತ್ಪಾದನೆ ಉತ್ತೇಜಿಸುವ ಸಲುವಾಗಿ ಇದೀಗ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ (ಕೆಒಎಫ್) ಮತ್ತು ಬೆಂಗಳೂರು ಕೃಷಿ ವಿವಿಯ ಜತೆಗೂಡಿ “ಆಪರೇಷನ್‌ ಗೋಲ್ಡನ್‌ ಫ್ಲೋ’ ಯೋಜನೆ ಅನುಷ್ಠಾನಕ್ಕೆ ಹೆಜ್ಜೆಯಿರಿಸಿದೆ.

Advertisement

ಆ ಹಿನ್ನೆಲೆಯಲ್ಲಿ ಸೋಮವಾರ ಕೋರಮಂಗಲದ ಭಾರತೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್‌, ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ಅಧಕ್ಷ ಅಣ್ಣಸಾಹೇಬ್‌ ಶಂಕರ್‌ ಜೊಲ್ಲೆ ಸಮ್ಮುಖದಲ್ಲಿ ಈ ಕುರಿತ ಲಿಖಿತ ಒಪ್ಪಂದಕ್ಕೆ ಸಹಿಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತ ಅಡುಗೆ ಎಣ್ಣೆಗಾಗಿ ರಷ್ಯಾ, ಉಕ್ರೇನ್‌, ಮಲೇಷಿಯಾ ಸೇರಿದಂತೆ ಇನ್ನಿತರ ರಾಷ್ಟ್ರಗಳ ಮೇಲೆ ಅವಲಂಬಿತ ವಾಗಿದೆ. ಪ್ರತಿ ವರ್ಷ ಎಣ್ಣೆ ಉತ್ಪಾದನೆಯ ಸಂಖ್ಯೆ ಕ್ಷೀಣಿಸುತ್ತಿದೆ.

ಆ ಹಿನ್ನೆಲೆಯಲ್ಲಿ ಭಾರತ ಅಡುಗೆ ಎಣ್ಣೆ ಉತ್ಪದನಾ ಕ್ಷೇತ್ರದಲ್ಲಿ ಸ್ವಾಲಂಬಿ (ಆತ್ಮನಿರ್ಭರ್‌)ಆಗಬೇಕಾಗಿದೆ ಎಂದು ಹೇಳಿದರು.

ರಾಜ್ಯ ಕೂಡ ಸೋಯಾಬಿನ್‌ ಸೇರಿದಂತೆ ಹಲವು ಪದಾರ್ಥಗಳಿಗೆ ಹೊರ ರಾಜ್ಯಗಳಿಗೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ಬಳಕೆ ಮಾಡಿ ಕೊಂಡು ರಾಜ್ಯ ಕೂಡ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸ್ವಾವಲಂಬಿ ಆಗಬೇಕು ಎಂದು ತಿಳಿಸಿದರು.

Advertisement

ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ಕೇವಲ ರೈತರಿಗೆ ಬೀಜಗಳನ್ನು ನೀಡಿ ಕೈ ತೊಳೆದು ಕೊಂಡರೆ ಸಾಲದು, ಬೀಜ ಕೊಡುವುದರ ಜತೆಗೆ ರೈತರಿಂದ ಖರೀದಿಯನ್ನು ಕೂಡ ಮಾಡಬೇಕು ಎಂದು ಸಲಹೆ ನೀಡಿದರು.

ವಿವಿಗಳು ಹೈಬ್ರಿಡ್‌ ಬೀಜ ಸಂಶೋಧನೆ ಮಾಡಲಿ
ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯಗಳು ಸಂಶೋಧನೆಯಲ್ಲಿ ತೊಡಗಿ ಹೊಸ ಹೈಬ್ರಿಡ್‌ ಎಣ್ಣೆ ಬೀಗಳನ್ನು ರೈತರಿಗೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಹಲವು ವರ್ಷಗಳಿಂದ ಎಣ್ಣೆ ಬೀಜದಲ್ಲಿ ಹೊಸ ತಳಿಯೇ ಬಂದಿಲ್ಲ. ಆ ಹಿನ್ನೆಲೆಯಲ್ಲಿ ರೈತರ ಇಳುವರಿ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳು ಮುಂದಾಗಲಿ ಎಂದು ಹೇಳಿದರು.

ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯ ಅಧಕ್ಷ ಅಣ್ಣಸಾಹೇಬ್‌ ಜೊಲ್ಲೆ, ಭಾರತೀಯ ಹೈನುಗಾರಿಕಾ ಅಭಿವೃದ್ದಿ ಮಂಡಳಿ(ಎನ್‌ಡಿಬಿ) ಅಧ್ಯಕ್ಷ ಮಿನೇಶ್‌ ಷಾ, ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next