ನವದೆಹಲಿ: ದೇಶದ ಜನರು ತಮ್ಮ ಮಾತೃಭಾಷೆಯೊಂದಿಗೆ ಹಿಂದಿ ಭಾಷೆಯನ್ನೂ ಬಳಸುವ ಬಗ್ಗೆ ವಾಗ್ದಾನ ತೆಗೆದುಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ (ಸೆ.14) ಮನವಿ ಮಾಡಿಕೊಂಡಿದ್ದು, ಭಾಷೆಗಳ ಜತೆಯಲ್ಲೇ ಭಾರತ ಆತ್ಮನಿರ್ಭರ್ ಆಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ:ಈ ಹೆದ್ದಾರಿಯ ಸಂಚಾರವೇ ಒಂದು ಸಾಹಸ : ಇದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ
ಹಿಂದಿ ದಿನಾಚರಣೆಯ ಅಂಗವಾಗಿ ಜನರನ್ನು ಉದ್ದೇಶಿಸಿ ಮಾತನಾಡಿಸಿದ ಶಾ, ಆತ್ಮನಿರ್ಭರ್ ಎಂಬುದು ಕೇವಲ ದೇಶೀಯ ಉತ್ಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಾವು ಭಾಷೆಗಳೊಂದಿಗೆ ಸಹ ಆತ್ಮನಿರ್ಭರ್ ಆಗಿರಬೇಕು. ಒಂದು ವೇಳೆ ಪ್ರಧಾನಿಯವರು ಅಂತಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಮಾತನಾಡಲು ಸಾಧ್ಯವಾದರೆ, ನಾವು ಇದರಿಂದ ಮುಜುಗರ ಪಡಲು ಏನಿದೆ? ಹಿಂದಿಯಲ್ಲಿ ಮಾತನಾಡುವುದು ಕಳವಳಕಾರಿ ವಿಚಾರ ಎಂಬ ದಿನಗಳು ಕಳೆದುಹೋಗಿದೆ ಎಂದು ಶಾ ಹೇಳಿದರು.
ಭಾರತದ ಪ್ರಗತಿ ಮಾತೃಭಾಷೆ ಮತ್ತು ಅಧಿಕೃತ ಭಾಷೆಯ ಸಮನ್ವಯತೆಯಲ್ಲಿ ಅಡಕವಾಗಿದೆ ಎಂದು ಅಮಿತ್ ಶಾ ತಿಳಿಸಿದರು. ತಾವು ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ, ತಮ್ಮ ಮಾತೃಭಾಷೆ ಜತೆಗೆ ಅಧಿಕೃತ ಭಾಷೆಗಳಲ್ಲಿ ಒಂದಾಗಿರುವ ಹಿಂದಿಯನ್ನೂ ಹಂತ, ಹಂತವಾಗಿ ಬಳಸಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾ ಹೇಳಿದರು.
ಮಾತೃಭಾಷೆಯ ಜತೆಗೆ ಅಧಿಕೃತ ಹಿಂದಿ ಭಾಷೆಯನ್ನು ಬಳಸುವುದರಲ್ಲಿ ದೇಶದ ಪ್ರಗತಿ ಅಡಗಿದೆ ಎಂದು ಪ್ರತಿಪಾದಿಸಿರುವ ಶಾ, ಎಲ್ಲರಿಗೂ ಹಿಂದಿ ದಿವಸ ಆಚರಣೆಯ ಶುಭಾಶಯಗಳು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.