ಸೈಂಟ್ ಕಿಟ್ಸ್: ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಐದು ವಿಕೆಟ್ ಅಂತರದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ತಂಡ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 19.4 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟಾದರೆ, ವಿಂಡೀಸ್ ತಂಡ ಐದು ವಿಕೆಟ್ ಕಳೆದುಕೊಂಡು ಕೊನೆಯ ಓವರ್ ನಲ್ಲಿ ಗುರಿ ತಲುಪಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತಕ್ಕೆ ವಿಂಡೀಸ್ ವೇಗಿ ಒಬೆಡ್ ಮೆಕಾಯ್ ದುಸ್ವಪ್ನವಾಗಿ ಕಾಡಿದರು. ಪಂದ್ಯದ ಮೊದಲ ಎಸೆತದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಿತ್ತ ಮೆಕಾಯ್, ಭಾರತದ ಬ್ಯಾಟಿಂಗ್ ಬಲ ಮುರಿದರು. ನಾಲ್ಕು ಓವರ್ ಗಳಲ್ಲಿ ಕೇವಲ 17 ರನ್ ನೀಡಿದ ಮೆಕಾಯ್ ಆರು ವಿಕೆಟ್ ಪಡೆದರು. ಭಾರತದ ಪರ ಹಾರ್ದಿಕ್ ಪಾಂಡ್ಯ 31 ರನ್, ಜಡೇಜಾ 27 ರನ್ ಮತ್ತು ಪಂತ್ 24 ರನ್ ಗಳಿಸಿದರು.
ಇದನ್ನೂ ಓದಿ:ಮಳೆಯ ನಡುವೆಯೇ ಕಬಡ್ಡಿ ಪಂದ್ಯ: ಹುಣಸೂರಿನ ಮಹಿಳಾ ಕಾಲೇಜು ಪ್ರಥಮ
ಗುರಿ ಬೆನ್ನತ್ತಿದ ವಿಂಡೀಸ್ ಗೆ ಬ್ರಾಂಡನ್ ಕಿಂಗ್ ಬ್ಯಾಟಿಂಗ್ ಬಲ ತುಂಬಿದರು. 52 ಎಸೆತ ಎದುರಿಸಿದ ಕಿಂಗ್ 68 ರನ್ ಗಳಿಸಿದರು. ಉಳಿದಂತೆ ಕೀಪರ್ ಡೆವೋನ್ ಥಾಮಸ್ 31 ರನ್ ಬಾರಿಸಿದರು.
ಅಂತಿಮ ಓವರ್ ನಲ್ಲಿ ವಿಂಡೀಸ್ ಗೆ ಹತ್ತು ರನ್ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಲಭ್ಯರಿದ್ದರೂ, ನಾಯಕ ರೋಹಿತ್ ಶರ್ಮಾ ಯುವ ವೇಗಿ ಆವೇಶ್ ಖಾನ್ ರನ್ನು ನಂಬಿದರು. ಆದರೆ ಮೊದಲ ಎಸೆತವನ್ನು ನೋ ಬಾಲ್ ಹಾಕಿದ ಆವೇಶ್ ಖಾನ್, ನಂತರದ ಎರಡು ಎಸೆತಗಳಲ್ಲಿ ಸಿಕ್ಸ್- ಫೋರ್ ಬಿಟ್ಟು ಕೊಟ್ಟರು. 19.2 ಓವರ್ ಗಳಲ್ಲಿ ಗುರಿ ತಲುಪಿದ ವಿಂಡೀಸ್ ಜಯ ಸಾಧಿಸಿತು.