Advertisement

ಭಾರತ 4ನೇ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ಸಜ್ಜಾಗುತ್ತಿದೆ

12:33 PM Dec 01, 2018 | Team Udayavani |

ಬೆಂಗಳೂರು: ಭಾರತವು ನಾಲ್ಕನೇ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ಸಿದ್ಧವಾಗುತ್ತಿದ್ದು, ಯುವ ಉದ್ಯಮಿಗಳು ವಿಶ್ವಾಸ ಮತ್ತು ನಂಬಿಕೆ ಜತೆ ಹೆಜ್ಜೆಯಿಡಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್‌ಕುಮಾರ್‌ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಲ್ಲಿ ಶುಕ್ರವಾರ ಯುವ ಇಂಡಿಯಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವಂತಿಕೆ, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಇಚ್ಛಾಶಕ್ತಿ ಇದ್ದರೆ ಉದ್ದಿಮೇದಾರರಾಗಲು ಸಾಧ್ಯ ಎಂದು ಹೇಳಿದರು.

ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಹಣ ಹುಡುಕಿಕೊಂಡು ಬರುತ್ತದೆ. ಅವಕಾಶದ ಬಾಗಿಲು ತೆರೆಯುತ್ತದೆ. ಭಾರತ ಬೇಡುವ ಭೂಮಿ ಅಲ್ಲ. ಭಗವಂತನನ್ನು ಕರೆಸಿಕೊಳ್ಳುವ ಭೂಮಿ ಎಂದರು. ದೇಶ ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಹೂಡಿಕೆದಾರರಿಗೆ ಅತ್ಯಂತ ಸಣ್ಣ ವಸ್ತುವನ್ನೂ ಇದು ಇಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಿಗುವುದಿಲ್ಲ ಎನ್ನುವಂತೆ ನಂಬಿಸಬೇಕು. ಆಗ ಮಾತ್ರ ಹೂಡಿಕೆದಾರರು ಹೆಚ್ಚು ಬೆಂಬಲಿಸಲು ಸಾಧ್ಯ.

ಸಬ್ಸಿಡಿ, ಅನುದಾನಗಳ ಹಿಂದೆ ಹೋಗುವವರು ಉದ್ಯಮಿಗಳಾಗುವುದಿಲ್ಲ. ಉದ್ಯಮ ಹಲವರಿಗೆ ಬದುಕು ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು. ಭಾರತವು ಚೀನಾಕ್ಕಿಂತ ಅತ್ಯಂತ ವಿಶಾಲ ಹಾಗೂ ಸದೃಢ ರಾಷ್ಟ್ರವಾಗಿದ್ದು, ಎಲ್ಲ ರೀತಿಯ ಸಂಪತ್ತು ಇದೆ.

ಆದರೂ, ನಾವು ಚೀನಾ ದೊಡ್ಡ ದೇಶ ಎನ್ನುತ್ತಿರುವುದು ವಿಪರ್ಯಾಸ. ಅಮೆರಿಕ, ಚೀನಾ, ಯುರೋಪ್‌ ದೇಶಗಳನ್ನು ಮಾದರಿ ದೇಶ ಎನ್ನುವುದಕ್ಕಿಂತ ನಮ್ಮ ಯುವಕರು ಶ್ರದ್ಧೆ, ವಿಶ್ವಾಸ ಹಾಗೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ, ನಾವೇ ಅವರಿಗೆ ಮಾದರಿಯಾಗುತ್ತೇವೆ ಎಂದು ಹೇಳಿದರು.

Advertisement

ಬಂಡವಾಳ ಹೂಡಿಕೆಗೆ ಯಾರನ್ನೂ ಬೇಡಿಕೊಳ್ಳಬಾರದು. ಕರ್ನಾಟಕದಲ್ಲಿ ಹೂಡಿಕೆ ಮಾಡಿ, ಅದಕ್ಕೆ ರಕ್ಷಣೆ ಮತ್ತು ಅಗತ್ಯ ಮೂಲ ಸೌಕರ್ಯ ನಾವು ನೀಡುತ್ತೇವೆ. ನಿಮಗೆ ಲಾಭ ಬೇಕಾದರೆ ನಮ್ಮಲ್ಲಿ ಬಂದು ಹೂಡಿಕೆ ಮಾಡಿ ಎಂದು ಕರೆಯಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ, ರಷ್ಯಾ ಮೊದಲಾದ ದೇಶಗಳಿಗೆ ಹೋದಾಗ ಭಿಕ್ಷೆ ಬೇಡಲಿಲ್ಲ ಎಂದು ವಿವರಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿ ಮಾತನಾಡಿ, ಎಫ್‌ಕೆಸಿಸಿಐ 102 ವರ್ಷದ ಇತಿಹಾಸ ಹೊಂದಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಸಂಸ್ಥೆ ಹೊಂದಿದೆ. ಕೌಶಲ ತರಬೇತಿ ನೀಡಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ನೆರವಾಗಲು ಬೆಂಗಳೂರಿನಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭಿಸಲಾಗಿದೆ.

ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಎಫ್‌ಕೆಸಿಸಿಐ ಸಿ.ಆರ್‌.ಜನಾರ್ಧನ್‌, ಪರಿಕರ್‌ ಸುಂದರ್‌, ಮಾಜಿ ಅಧ್ಯಕ್ಷ ಕೆ.ರವಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next