Advertisement

ಭಾರತಕ್ಕೆ ತೆರಳುವ ಪ್ರಜೆಗಳಿಗೆ ಚೀನದಿಂದ ಮತ್ತೆ ಪಾಠ

06:15 AM Aug 25, 2017 | |

ಬೀಜಿಂಗ್‌: ಭಾರತದೊಂದಿಗೆ ಡೋಕ್ಲಾಂ ಗಡಿ ವಿವಾದದಲ್ಲಿ ತಲ್ಲೀನವಾಗಿರುವ ಚೀನ, ಭಾರತಕ್ಕೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ 2 ತಿಂಗಳಲ್ಲಿ 2ನೇ ಬಾರಿ ಸುರಕ್ಷಾ ಸಲಹೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಭಾರತದಲ್ಲಿನ ಒಟ್ಟಾರೆ ಪರಿಸ್ಥಿತಿಯೇ ಸರಿಯಿಲ್ಲವೆಂದು ಬಿಂಬಿಸುವ ಯತ್ನವನ್ನು ಚೀನ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

Advertisement

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದಿರುವ 2 ರೈಲು ಅಪಘಾತಗಳು, ಪ್ರಾಕೃತಿಕ ವಿಕೋಪಗಳು, ರೋಗಗಳನ್ನು ಚೀನ ಸರಕಾರ ಸುರಕ್ಷಾ ಸಲಹೆಗಳಲ್ಲಿ ಪ್ರಸ್ತಾಪಿಸಿದೆ. ಪ್ರಯಾಣದ ವೇಳೆ ಗುರುತುಪತ್ರ ಜೊತೆಗಿಟ್ಟುಕೊಳ್ಳಿ, ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಿ, ಸ್ಥಳೀಯ ಸ್ಥಿತಿಗತಿಗಳನ್ನು ತಿಳಿದಿರಿ, ಅನಗತ್ಯ ಪ್ರಯಾಣಗಳನ್ನು ಮಾಡಲೇಬೇಡಿ. ಪ್ರಯಾಣ ಮಾಡಲೇಬೇಕೆಂದಿದ್ದರೆ ನಿಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಮೊದಲೇ ಆ ಬಗ್ಗೆ ಮಾಹಿತಿ ನೀಡಿ ಎಂಬ ಸೂಚನೆಗಳನ್ನು ನೀಡಿದೆ. ಈ ಸೂಚನೆಗಳು ವರ್ಷಾಂತ್ಯದವರೆಗೆ ಜಾರಿಯಲ್ಲಿರಲಿವೆ.

ರಸ್ತೆ ಬಗ್ಗೆ ಪ್ರಶ್ನೆ: ಏತನ್ಮಧ್ಯೆ, ಭಾರತದ ವಿಚಾರದಲ್ಲಿ ಮೂಗುತೂರಿಸಿರುವ ಚೀನವು, ಲಡಾಖ್‌ನ ಪಂಗಾಂಗ್‌ ಸರೋವರದ ಸಮೀಪ ರಸ್ತೆ ನಿರ್ಮಿಸುತ್ತಿರುವ ಭಾರತದ ಉದ್ದೇಶವೇನು ಎಂದು ಪ್ರಶ್ನಿಸಿದೆ. “ಇಷ್ಟು ದಿನ ನಾವು ರಸ್ತೆ ನಿರ್ಮಿಸುತ್ತಿದ್ದೇವೆ ಎಂದು ಆರೋಪಿಸುತ್ತಾ ಬಂದ ಭಾರತವು ಈಗ, ಸೀಮೆಯನ್ನೇ ಗುರುತಿಸಿಲ್ಲದಂಥ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ ತನಗೆ ತಾನೇ ಕಪಾಳಮೋಕ್ಷ ಮಾಡಿಕೊಂಡಿದೆ. ಇದು ಭಾರತವು ಹೇಳುವುದೊಂದು, ಮಾಡುವುದೊಂದು ಎಂಬುದನ್ನು ಸಾಬೀತುಪಡಿಸಿದೆ’ ಎಂದು ಚೀನ ವಿದೇಶಾಂಗ ಇಲಾಖೆ ಆರೋಪಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next