Advertisement

ಟೆಸ್ಟ್‌ ರದ್ದು: ಸರಣಿ ವಿಜೇತರ ನಿರ್ಧಾರ ಹೇಗೆ?

09:17 PM Sep 11, 2021 | Team Udayavani |

ಮ್ಯಾಂಚೆಸ್ಟರ್‌:  ಶುಕ್ರವಾರದಿಂದ ಆರಂಭವಾಗಬೇಕಿದ್ದ ಭಾರತ-ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ ಪಂದ್ಯ ರದ್ದಾಗಿದೆ. ಭಾರತದ ಸಹಾಯಕ ಸಿಬಂದಿಯಲ್ಲಿ ಕೊರೊನಾ ಹೆಚ್ಚಾಗಿರುವುದೇ ಇದಕ್ಕೆ ಕಾರಣ.

Advertisement

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮತ್ತು ಬಿಸಿಸಿಐಗಳು ಪರಸ್ಪರ ಸಮ್ಮತಿಯಿಂದಲೇ ಈ ನಿರ್ಧಾರಕ್ಕೆ ಬಂದಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ. ಆದರೆ ಇಂಗ್ಲೆಂಡ್‌ನ‌ಲ್ಲಿ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಐಪಿಎಲ್‌ ಮತ್ತು ಹಣಕ್ಕಾಗಿ ಆಟಗಾರರು ತೆಗೆದುಕೊಂಡಿರುವ ಕ್ರಮ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಆರೋಪಿಸಿದ್ದಾರೆ.

ಹಣದ ಹೊಳೆಯನ್ನೇ ಹರಿಸುವ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ 5ನೇ ಟೆಸ್ಟ್‌ನಲ್ಲಿ ಆಡಲು ಭಾರತದ ಆಟಗಾರರು ಹಿಂಜರಿದರು. ಕೊರೊನಾ ಅಂಟಿಸಿಕೊಂಡು ಐಪಿಎಲ್‌ನಿಂದ ಹೊರಬೀಳಬೇಕಾಗುತ್ತದೋ ಎನ್ನುವ ಭೀತಿಯೇ ಇದಕ್ಕೆ ಕಾರಣ ಎಂದಿದ್ದಾರೆ ವಾನ್‌.

ಮುಂದೆ ನಡೆದೀತೇ ಟೆಸ್ಟ್‌?:

ಇಲ್ಲಿನ ಮುಖ್ಯ ಪ್ರಶ್ನೆಯೇನೆಂದರೆ, ಸರಣಿ ವಿಜೇತರನ್ನು ಹೇಗೆ ನಿರ್ಧರಿಸುವುದು ಎಂಬುದು. ಈ ಪಂದ್ಯ ಮುಂದೆಂದಾದರೂ ನಡೆಯಲಿದೆಯೇ? ಅಲ್ಲಿನ ಫ‌ಲಿತಾಂಶದ ಆಧಾರದಲ್ಲಿ ಸರಣಿ ವಿಜೇತರನ್ನು ನಿರ್ಧರಿಸಲಾಗುವುದೇ? ಇದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಪಂದ್ಯವೇ ನಡೆಯುವುದಿಲ್ಲ ಎಂದಾದರೆ ಭಾರತವನ್ನು ಸರಣಿ ವಿಜೇತರು ಎಂದು ನಿರ್ಧರಿಸಲು ಇಂಗ್ಲೆಂಡ್‌ ಒಪ್ಪಿಕೊಳ್ಳುವುದೇ?

Advertisement

ಮುಂದಿನ ವರ್ಷ ಭಾರತ ಸೀಮಿತ ಓವರ್‌ಗಳ ಸರಣಿಗಳಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಲಿದೆ. ಅಲ್ಲಿ ಈ ಟೆಸ್ಟ್‌ ಪಂದ್ಯವನ್ನು ಆಡಿಸಲು ಸಾಧ್ಯವಿದೆ. ಆದರೆ ಅಷ್ಟು ದೀರ್ಘ‌ ಅಂತರದ ಬಳಿಕ ಇದರ ಫ‌ಲಿತಾಂಶವನ್ನು ಈ ಸರಣಿಗೆ ಅಳವಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಐಸಿಸಿ ಕ್ರಮವೇನು?:

ಇದು ಕೇವಲ ಎರಡು ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳ ನಡುವಿನ ಪ್ರತಿಷ್ಠೆಯ ಸಮರವಲ್ಲ. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಒಳಪಡುವ ಸರಣಿಯಾ ಇದಾಗಿರುವುದರಿಂದ ಇಲ್ಲಿ ಐಸಿಸಿ ನಿರ್ಧಾರ, ಅದು ತೆಗೆದುಕೊಳ್ಳುವ ಕ್ರಮವೂ ಮುಖ್ಯವಾಗುತ್ತದೆ. ಆದರೆ ಕ್ರಿಕೆಟ್‌ ಆಡಳಿತ ಮಂಡಳಿ ಈ ಬೆಳವಣಿಗೆ ಬಗ್ಗೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಚ್ಚರಿಯಾಗಿ ಕಾಣುತ್ತದೆ.

ಭಾರತವೇ ಈ ಟೆಸ್ಟ್‌ ಪಂದ್ಯದಿಂದ ಹಿಂದಕ್ಕೆ ಸರಿದಿದೆ ಎಂಬುದು ಇಸಿಬಿ ಆರೋಪ. ತನ್ನ ವೈದ್ಯಕೀಯ ಸಿಬಂದಿಗೆಲ್ಲ ಕೊರೊನಾ ಸೋಂಕು ತಗುಲಿದೆ, ಇಂಗ್ಲೆಂಡ್‌ ಕಡೆಯಿಂದ ವೈದ್ಯರ ಸೇವೆ ಲಭಿಸಿದರೆ ಪಂದ್ಯ ಮುಂದುವರಿಸಲು ಬಿಸಿಸಿಐ ಮುಂದಾಗಿತ್ತು ಎಂಬುದಾಗಿ ವರದಿಯೊಂದು ಹೇಳುತ್ತದೆ. ಆದರೆ ವಾಸ್ತವ ಮಾತ್ರ ಬೇರೆಯೇ ಇದೆ ಎಂಬುದಷ್ಟೇ ಸತ್ಯ.

ಇಂಗ್ಲೆಂಡಿಗೆ ಆರ್ಥಿಕ ನಷ್ಟ:

ಅಂತಿಮ ಟೆಸ್ಟ್‌ ಪಂದ್ಯವನ್ನು ಆಡದೇ ಇದ್ದುದರಿಂದ ಮ್ಯಾಂಚೆಸ್ಟರ್‌ ಮತ್ತು ಇಸಿಬಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಎದುರಾಗಲಿದೆ. ಕೊರೊನಾವನ್ನು ಮುಂದೊಡ್ಡಿ ಬಿಸಿಸಿಐ ಪಂದ್ಯದಿಂದ ಹಿಂದೆ ಸರಿದಿರುವುದರಿಂದ ಇದಕ್ಕೆ ವಿಮೆ ಲಭ್ಯವಾಗುವುದಿಲ್ಲ. ಇದು ಇಂಗ್ಲೆಂಡ್‌ ಮಂಡಳಿಯನ್ನು ಚಿಂತೆಗೀಡು ಮಾಡಿದೆ.

ಹಾಗೆಯೇ ಈ ಪಂದ್ಯದಿಂದ ಬಿಸಿಸಿಐ ತಾನೇ ಹಿಂದೆ ಸರಿದಿದೆ ಎನ್ನುವುದು ಖಚಿತವಾದರೆ, ಇಂಗ್ಲೆಂಡ್‌ ಗೆದ್ದಿದೆ ಎಂದು ತೀರ್ಪು ನೀಡುವ ಅವಕಾಶವೊಂದು ಐಸಿಸಿ ಮುಂದಿದೆ. ಆಗ ಸರಣಿ 2-2ರಿಂದ ಡ್ರಾಗೊಳ್ಳಲಿದೆ. ಈ ಫ‌ಲಿತಾಂಶದಿಂದ ಪಾರಾಗಬೇಕಾದರೆ, ಭಾರತ ಮುಂದೊಂದು ದಿನ ಈ ಟೆಸ್ಟ್‌ ಪಂದ್ಯವನ್ನು ತಾನು ಆಡುವುದಾಗಿ ಭರವಸೆ ನೀಡಬೇಕಾದುದು ಅನಿವಾರ್ಯ.

ಮುಂಬಯಿ ದಾಳಿಯ ವೇಳೆ…:

2008ರ ಮುಂಬಯಿ ದಾಳಿಯ ವೇಳೆ ಕೆವಿನ್‌ ಪೀಟರ್‌ಸನ್‌ ನಾಯಕತ್ವದ ಇಂಗ್ಲೆಂಡ್‌ ತಂಡ ಭಾರತ ಪ್ರವಾಸದಲ್ಲಿತ್ತು. ದಾಳಿಯ ಬೆನ್ನಲ್ಲೇ ಇಂಗ್ಲೆಂಡ್‌ ತಂಡ ಈ ಸರಣಿಯನ್ನು ಅರ್ಧದಲ್ಲೇ ಬಿಟ್ಟು ವಾಪಸಾಗಿತ್ತು. ಆಗ ಗುವಾಹಟಿ ಮತ್ತು ಹೊಸದಿಲ್ಲಿಯ ಕೊನೆಯ 2 ಏಕದಿನ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ 2 ಟೆಸ್ಟ್‌ ಪಂದ್ಯಗಳನ್ನಾಡಲು ಇಂಗ್ಲೆಂಡ್‌ ತಂಡ ಭಾರತಕ್ಕೆ ಮರಳಿತು. ಮುಂಬಯಿಯ ಟೆಸ್ಟ್‌ ಪಂದ್ಯವನ್ನು ಚೆನ್ನೈಗೆ ಸ್ಥಳಾಂತರಿಸಲಾಗಿತ್ತು. ಭಾರತ ಕೂಡ ಇಂಥದೇ ನಿರ್ಧಾರ ತೆಗೆದುಕೊಂಡು ಉಳಿದೊಂದು ಟೆಸ್ಟ್‌ ಪಂದ್ಯವನ್ನು ಪೂರ್ತಿಗೊಳಿಸಬೇಕು ಎಂಬುದಾಗಿ ಮಾಜಿ ಆಟಗಾರ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.

ಇದೇ ವೇಳೆ ಪೀಟರ್‌ಸನ್‌ ಭಾರತದ ಬೆಂಬಲಕ್ಕೆ ನಿಂತಿದ್ದು, ಇಂಗ್ಲೆಂಡ್‌ ತಂಡ ಕೊರೊನಾ ಭೀತಿಯಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next