ಹೊಸದಿಲ್ಲಿ: ಬಾರ್ಡರ್ – ಗಾವಸ್ಕರ್ ಟ್ರೋಫಿಯ ಎರಡನೇ ಪಂದ್ಯದ ಎರಡನೇ ದಿನದಾಟ ನಡೆಯುತ್ತಿದ್ದು, ಭಾರತೀಯ ಅಗ್ರಕ್ರಮಾಂಕದ ಬ್ಯಾಟರ್ ಗಳು ಪರದಾಡಿದರು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಅವರ ಔಟಾದ ಬಗ್ಗೆ ಭಾರೀ ಅಪಸ್ವರ ಕೇಳಿಬಂದಿದೆ.
ಒಂದೆಡೆ ಭಾರತೀಯ ಬ್ಯಾಟರ್ ಗಳು ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಮತ್ತೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿನಿಂತು ಬ್ಯಾಟಿಂಗ್ ಮಾಡುತ್ತಿದ್ದರು. ರವೀಂದ್ರ ಜಡೇಜಾ ಜೊತೆ ಜೊತೆಯಾಟ ನಡೆಸಿದ ವಿರಾಟ್ ತಂಡಕ್ಕೆ ತಕ್ಕಮಟ್ಟಿನ ರಿಲೀಫ್ ನೀಡಿದ್ದರು.
ಆದರೆ 44 ರನ್ ಗಳಿಸಿದ್ದ ವೇಳೆ ಆಸೀಸ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆದ ಚೆಂಡು ಕೊಹ್ಲಿ ಕಾಲಿಗೆ ಬಡಿಯುತು. ಅಂಪೈರ್ ನಿತಿನ್ ಮೆನನ್ ಔಟ್ ತೀರ್ಮಾನ ನೀಡಿದರು. ಕೂಡಲೇ ವಿರಾಟ್ ರಿವೀವ್ ಪಡೆದುಕೊಂಡರು. ರಿವೀವ್ ವೇಳೆ ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡಕ್ಕೂ ಬಡಿದಿದೆ ಎಂದು ಅಲ್ಟ್ರಾಎಡ್ಜ್ ಸ್ಪಷ್ಟವಾಗಿ ತೋರಿಸಿದೆ.
ಇದನ್ನೂ ಓದಿ:ಏಪ್ರಿಲ್ 25 ರಂದು ತೆರೆಯಲಿರುವ ಕೇದಾರನಾಥ ದೇಗುಲದ ಬಾಗಿಲು
ಆದರೆ, ಚೆಂಡು ಮೊದಲು ಬ್ಯಾಟ್ ಗೆ ತಾಗಿತ್ತೋ ಅಥವಾ ಪ್ಯಾಡ್ ಗೆ ತಗುಲಿತೋ ಎಂಬುದು ಸ್ಪಷ್ಟವಾಗಿಲ್ಲ. ಚೆಂಡು ಮೊದಲು ಬ್ಯಾಟ್ ಗೆ ಬಡಿದರೆ, ಅದನ್ನು ಲೆಗ್ ಬಿಫೋರ್ ವಿಕೆಟ್‌ಗೆ ನೀಡಲಾಗುವುದಿಲ್ಲ. ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲದಿದ್ದರೂ, ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ಅವರು ಆ ಚೆಂಡು ಮೊದಲು ಪ್ಯಾಡ್ ಗೆ ಹೊಡೆಯುತ್ತಿರುವಂತೆ ತೋರಿತು ಎಂದು ಹೇಳಿ ಔಟ್ ನೀಡಿದರು.
ಈ ಅಂಪೈರಿಂಗ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗದೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ಪ್ರತಿಬಾರಿಯೂ ಅಂಪೈರ್ ಗಳು ಕುಟಿಲ ಆಟವಾಡುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೂರುತ್ತಿದ್ದಾರೆ.