ಮುಂದಿನ ವರ್ಷ ಇದೇ ವೇಳೆ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂಗ್ಲೆಂಡಿನಲ್ಲೇ ನಡೆಯುವುದರಿಂದ, 35 ವರ್ಷಗಳ ಹಿಂದೆ “ಕಪಿಲ್ ಡೆವಿಲ್ಸ್’ ಇಂಗ್ಲೆಂಡ್ ನೆಲದಲ್ಲೇ ಐತಿಹಾಸಿಕ ಸಾಧನೆ ದಾಖಲಿಸಿರುವ ಹಿನ್ನೆಲೆಯಲ್ಲಿ ಕೊಹ್ಲಿ ಪಡೆಯ ಪಾಲಿಗೆ ಈ ಕಿರು ಸರಣಿ ಅತ್ಯಂತ ಮಹತ್ವದ್ದಾಗಿದೆ. ಇನ್ನೊಂದೆಡೆ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿರುವುದರಿಂದ ಇಯಾನ್ ಮಾರ್ಗನ್ ತಂಡದ ಪಾಲಿಗೂ ಇದು ಪ್ರತಿಷ್ಠಿತ ಸರಣಿ. ಹೀಗಾಗಿ ಎರಡೂ ತಂಡಗಳ ನಡುವೆ ರೋಚಕ ಹೋರಾಟ ಕಂಡುಬರುವುದರಲ್ಲಿ ಅನುಮಾನವಿಲ್ಲ.
Advertisement
ಇಂಗ್ಲೆಂಡ್ ವಿಶ್ವದಾಖಲೆಯ ಸಾಧನೆಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್, ಈ ಛಾತಿಗೆ ತಕ್ಕ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯನ್ನೂ ಹೊಂದಿದೆ. 50 ಓವರ್‌ಗಳ ಪಂದ್ಯಗಳಿಗೆ ಹೇಳಿ ಮಾಡಿಸಿದಂತಿರುವ ಪಡೆಯನ್ನು ಹೊಂದಿರುವ ಇಂಗ್ಲೆಂಡಿಗೆ ಇದೇನೂ ಸವಾಲಾಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ. ಕಳೆದ ಏಕದಿನ ಸರಣಿಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ವೈಟ್‌ವಾಶ್ ಮಾಡಿದ ಹೆಗ್ಗಳಿಕೆ ಕೂಡ ಮಾರ್ಗನ್ ಬಳಗದ್ದಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಅತ್ಯಧಿಕ ಮೊತ್ತದ ವಿಶ್ವದಾಖಲೆ ನಿರ್ಮಿಸಿದ್ದನ್ನೂ ಮರೆಯುವಂತಿಲ್ಲ. ಹೀಗಾಗಿ ಟಿ20 ಸರಣಿ ಗೆದ್ದರೂ, ಟೀಮ್ ಇಂಡಿಯಾ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ರಾಯ್, ಬಟ್ಲರ್, ಬೇರ್‌ಸ್ಟೊ, ಮಾರ್ಗನ್, ರೂಟ್, ಹೇಲ್ಸ್, ಸ್ಟೋಕ್ಸ್ ಅವರಂಥ ಬಲಿಷ್ಠ ಹಾಗೂ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಇಂಗ್ಲೆಂಡ್ ಕ್ರೀಸ್ ಆಕ್ರಮಿಸಿಕೊಂಡು ಆಡಿದರೆ ಬೃಹತ್ ಮೊತ್ತಕ್ಕೇನೂ ಕೊರತೆ ಇಲ್ಲ. 2015ರ ವಿಶ್ವಕಪ್ ಆಘಾತದ ಬಳಿಕ 69 ಏಕದಿನ ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್, 46ರಲ್ಲಿ ಜಯಭೇರಿ ಮೊಳಗಿಸಿದೆ. ಇದರಲ್ಲಿ 11 ಸಲ 350 ರನ್ ಗಡಿ ಹಾಗೂ 3 ಸಲ 400 ರನ್ ಗಡಿ ದಾಟಿರುವುದು ಇಂಗ್ಲೆಂಡಿನ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿ. ಈ ಅವಧಿಯಲ್ಲಿ ಅದು ಏಕೈಕ ದ್ವಿಪಕ್ಷೀಯ ಸರಣಿಯಲ್ಲಿ ಸೋಲನುಭವಿಸಿತ್ತು; ಈ ಸರಣಿ ಸೋಲು ಕಳೆದ ವರ್ಷ ಭಾರತದ ವಿರುದ್ಧವೇ ಎದುರಾಗಿತ್ತು! ಇದಕ್ಕೂ ಮಾರ್ಗನ್ ಪಡೆ ಸೇಡು ತೀರಿಸಲು ಹಾತೊರೆಯುತ್ತಿದೆ.ಆದರೆ ಆತಿಥೇಯರ ಬೌಲಿಂಗ್ ವಿಭಾಗ ಬ್ಯಾಟಿಂಗಿನಷ್ಟು ಬಲಶಾಲಿಯಲ್ಲ. ಪ್ರವಾಸಿ ಭಾರತ ಇದರ ಭರಪೂರ ಲಾಭ ಎತ್ತಬೇಕಾದುದು ಅಗತ್ಯ.
2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ದೃಷ್ಟಿಯಿಂದ ಭಾರತ ಪರಿಪೂರ್ಣ ಹಾಗೂ ಸಶಕ್ತ ಬ್ಯಾಟಿಂಗ್ ಸರದಿಯನ್ನು ಅಂತಿಮ ಗೊಳಿಸಬೇಕಾದ ಸಿದ್ಧತೆಯಲ್ಲಿದೆ. ಅಗ್ರ ಕ್ರಮಾಂಕದಲ್ಲಿ ಸಾಕಷ್ಟು ಮಂದಿ ಇನ್‌ಫಾರ್ಮ್ ಬ್ಯಾಟ್ಸ್‌ಮನ್‌ಗಳಿರುವುದರಿಂದ, ತಂಡದ ಮಧ್ಯಮ ಕ್ರಮಾಂಕ ತುಸು ದುರ್ಬಲವಾಗಿ ರುವುದರಿಂದ ಕೆಲವು ಪ್ರಯೋಗಗಳಿಗೆ ಕೊಹ್ಲಿ ಪಡೆ ತನ್ನನ್ನು ಒಡ್ಡಿಕೊಳ್ಳಬೇಕಿದೆ.
ಆರಂಭಿಕ ಜೋಡಿಯಾದ ಶಿಖರ್ ಧವನ್-ರೋಹಿತ್ ಶರ್ಮ ಅವರನ್ನು ಬೇರ್ಪಡಿಸುವುದು ಈಗಿನ ಸ್ಥಿತಿಯಲ್ಲಿ ಅಸಾಧ್ಯ. ಕರ್ನಾಟಕದ ಅಗ್ರ ಸರದಿಯ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಪ್ರಚಂಡ ಫಾರ್ಮ್ನಲ್ಲಿ ಇರುವುದರಿಂದ ಇವರನ್ನು ವನ್‌ಡೌನ್‌ನಲ್ಲಿ ಆಡಿಸುವ ಯೋಜನೆ ಇದೆ. ಆಗ ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬರಬೇಕಾಗುತ್ತದೆ. ಅಯರ್‌ಲ್ಯಾಂಡ್ ವಿರುದ್ಧದ ಏಕೈಕ ಪಂದ್ಯದಲ್ಲಿ 70 ರನ್ ಹೊಡೆದ ರಾಹುಲ್, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಅಜೇಯ 101 ರನ್ ಸಿಡಿಸಿ ಮಿಂಚು ಹರಿಸಿದ್ದರು. ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕವನ್ನು ಆಧರಿಸಬೇಕಾಗುತ್ತದೆ. ಸ್ಪಿನ್ ಜೋಡಿಯ ಮೇಲೆ ನಿರೀಕ್ಷೆ
ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಇಲ್ಲದಿರುವುದೊಂದು ಕೊರತೆ. ಹೀಗಾಗಿ ಭುವನೇಶ್ವರ್ ಕುಮಾರ್ ಜತೆ ಉಮೇಶ್ ಯಾದವ್ ಹೊಸ ಚೆಂಡನ್ನು ಹಂಚಿಕೊಳ್ಳಬೇಕಾಗುತ್ತದೆ. ಸಿದ್ಧಾರ್ಥ್ ಕೌಲ್, ಶಾದೂìಲ್ ಠಾಕೂರ್ ಕೂಡ ರೇಸ್‌ನಲ್ಲಿದ್ದಾರೆ. ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿಯ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಇಂಗ್ಲೆಂಡ್ ಸ್ಪಿನ್ನಿಗೆ ಆಡಲು ವಿಫಲವಾದರೆ ಅದು ಭಾರತದ ಪಾಲಿಗೆ ಬಂಪರ್ ಆಗಿ ಪರಿಣಮಿಸುವುದು ಖಂಡಿತ. ಕಳೆದ ಚಾಂಪಿಯನ್ ಟ್ರೋಫಿ ಬಳಿಕ ಭಾರತ 27 ಏಕದಿನ ಪಂದ್ಯಗಳನ್ನಾಡಿದ್ದು, ಕನಿಷ್ಠ ಒಬ್ಬ ರಿಸ್ಟ್ ಸ್ಪಿನ್ನರ್ ಇದರಲ್ಲಿ ತಪ್ಪದೇ ಅವಕಾಶ ಪಡೆಯುತ್ತ ಬಂದಿದ್ದಾರೆ. ಚಾಹಲ್ 23 ಪಂದ್ಯಗಳಿಂದ 43 ವಿಕೆಟ್, ಕುಲದೀಪ್ 20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿ ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿದ್ದಾರೆ.
Related Articles
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಕೆ.ಎಲ್. ರಾಹುಲ್, ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್, ಸಿದ್ಧಾರ್ಥ್ ಕೌಲ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಶಾದೂಲ್ ಠಾಕೂರ್, ಭುವನೇಶ್ವರ್ ಕುಮಾರ್.
Advertisement
ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಜಾಸನ್ ರಾಯ್, ಜಾನಿ ಬೇರ್‌ಸ್ಟೊ, ಜಾಸ್ ಬಟ್ಲರ್, ಮೊಯಿನ್ ಅಲಿ, ಜೋ ರೂಟ್, ಜೇಕ್ ಬಾಲ್, ಟಾಮ್ ಕರನ್, ಅಲೆಕ್ಸ್ ಹೇಲ್ಸ್, ಲಿಯಮ್ ಪ್ಲಂಕೆಟ್, ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್.
ಆರಂಭ: ಸಂಜೆ 5.00ಪ್ರಸಾರ: ಸೋನಿ ನೆಟ್‌ವರ್ಕ್