ಹೊಸದಿಲ್ಲಿ: ಭಾರತವು “ಟೇಕನ್ ಫಾರ್ ಗ್ರಾಂಟೆಡ್” ಸಂಬಂಧಗಳಲ್ಲಿ ನಂಬಿಕೆ ಹೊಂದಿಲ್ಲ, ನಂಬಿಕೆ ಮತ್ತು ವಿಶ್ವಾಸಾರ್ಹತೆಯು ದೇಶಗಳ ನಡುವಿನ ಸಂಬಂಧಗಳ ಅಡಿಪಾಯ ನಿರ್ಮಾಣ ಮಾಡುತ್ತದೆ ಎಂದು ಜಗತ್ತು ಅರಿತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ(ಅ21) ಪ್ರತಿಪಾದಿಸಿದ್ದಾರೆ.
ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ಕೆನಡಾದೊಂದಿಗಿನ ಭಾರತದ ಸಂಬಂಧದ ವಿಚಾರದ ಕುರಿತು ನೇರವಾಗಿ ಉಲ್ಲೇಖಿಸದೆ ಪ್ರಧಾನಿ ಮೋದಿ ಮಾತನಾಡಿದರು.
ಭಾರತವು “ಟೇಕನ್ ಫಾರ್ ಗ್ರಾಂಟೆಡ್” ಸಂಬಂಧಗಳಲ್ಲಿ ನಂಬಿಕೆ ಹೊಂದಿಲ್ಲ. ನಮ್ಮ ಸಂಬಂಧಗಳು ನಂಬಿಕೆ ಮತ್ತು ವಿಶ್ವಾಸಾರ್ಹತೆಯಲ್ಲಿ ನೆಲೆಗೊಂಡಿವೆ. ಜಗತ್ತೂ ಇದನ್ನು ಅರಿತುಕೊಳ್ಳುತ್ತಿದೆ. ಭಾರತವು ಜಗತ್ತಿನಲ್ಲಿ ಸಂತೋಷವನ್ನು ಉಂಟುಮಾಡುವ ದೇಶವಾಗಿದೆ. ವಿಶ್ವವು ಭಾರತದ ಯಶಸ್ವಿ ಚಂದ್ರಯಾನ ಮಿಷನ್ ಅನ್ನು ಹಬ್ಬದಂತೆ ಆಚರಿಸಿತು. ಭಾರತದ ಬೆಳವಣಿಗೆಯು ಅಸೂಯೆ ಹುಟ್ಟಿಸುವುದಿಲ್ಲ ಏಕೆಂದರೆ ಅದರ ಪ್ರಗತಿಯು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ” ಎಂದರು.
“ಭಾರತದಿಂದ ಜಗತ್ತು ಸಂತೋಷವನ್ನು ಪಡೆಯುತ್ತದೆ. ಮೂಲಸೌಕರ್ಯದಿಂದ ಡಿಜಿಟಲ್ ಜ್ಞಾನ ಮತ್ತು ಸಂಶೋಧನೆಯ ಗುಣಮಟ್ಟದವರೆಗೆ ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಯನ್ನು ಉಲ್ಲೇಖಿಸಿ, ಭಾರತದಲ್ಲಿ ಆಗುತ್ತಿರುವ ಸರ್ವತೋಮುಖ ಬದಲಾವಣೆಗಳು ಜಾಗತಿಕ ನಂಬಿಕೆಯ ಮೂಲವಾಗಿದೆ ಎಂದರು.
”ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಸುಮಾರು 12 ಕೋಟಿ ಶೌಚಾಲಯ ನಿರ್ಮಾಣವಾಗಿದೆ, 16 ಕೋಟಿ ಜನರಿಗೆ ಅನಿಲ ಸಂಪರ್ಕ ದೊರೆತಿದೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 350ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು ಮತ್ತು 15ಕ್ಕೂ ಅಧಿಕ AIIMS ನಿರ್ಮಾಣವಾಗಿದೆ. 1.5 ಲಕ್ಷಕ್ಕೂ ಅಧಿಕ ಹೊಸ ಸ್ಟಾರ್ಟ್‌ಅಪ್‌ಗಳು ರಚನೆಯಾಗಿವೆ. 8 ಕೋಟಿ ಜನತೆ ಮುದ್ರಾ ಸಾಲ ಪಡೆದು ಮೊದಲ ಬಾರಿಗೆ ವ್ಯಾಪಾರ ಆರಂಭಿಸಿದ್ದಾರೆ. ವಿಶ್ವದ ಅತ್ಯಂತ ಯುವ ದೇಶಗಳಲ್ಲಿ ಒಂದಾಗಿರುವ ಭಾರತದ ಸಾಮರ್ಥ್ಯವನ್ನು ಆಗಸದೆತ್ತರಕ್ಕೆ ಕೊಂಡೊಯ್ಯುವ ಶಕ್ತಿ ನಮ್ಮ ಯುವಶಕ್ತಿಗಿದೆ” ಎಂದು ಪ್ರಧಾನಿ ಹೇಳಿದರು.
ಡಿಜಿಟಲ್ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಸಹಬಾಳ್ವೆ ನಡೆಸಬಲ್ಲವು ಎಂಬುದನ್ನು ಭಾರತ ಪ್ರದರ್ಶಿಸಿದೆ. ತಂತ್ರಜ್ಞಾನದ ಸೇರ್ಪಡೆ, ಪಾರದರ್ಶಕತೆ ಮತ್ತು ಸಬಲೀಕರಣದ ಸಾಧನವಾಗಿದೆ ಎಂದು ನಾವು ತೋರಿಸಿದ್ದೇವೆ. 21ನೇ ಶತಮಾನಕ್ಕೆ ಸ್ಥಿರತೆ, ಸುಸ್ಥಿರತೆ ಮತ್ತು ಪರಿಹಾರಗಳ ಅಗತ್ಯವಿದೆ. ಈ ಕ್ಷೇತ್ರಗಳಲ್ಲಿ ಭಾರತವು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದೆ, ನಮ್ಮ ಜನರ ಸಕ್ರಿಯ ಭಾಗವಹಿಸುವಿಕೆಯಿಂದ ನಡೆಸಲ್ಪಡುತ್ತಿದೆ” ಎಂದು ಮೋದಿ ಹೇಳಿದರು.
ಇದು ಅನೇಕ ಕ್ಷೇತ್ರಗಳಲ್ಲಿ ಜಾಗತಿಕ ಭವಿಷ್ಯದ ದಿಕ್ಕನ್ನು ಚಾಲನೆ ಮಾಡುವಲ್ಲಿ ಮುಂದಾಳತ್ವ ವಹಿಸುತ್ತಿದೆ. ಭಾರತವು ಬಿಕ್ಕಟ್ಟಿನಲ್ಲಿ ಸ್ನೇಹಿತ ಎಂದು ಜಗತ್ತು ಅರಿತುಕೊಂಡಿದೆ, ಮಾನವೀಯ ಕಾಳಜಿಯಿಂದ ಕೋವಿಡ್ ಅವಧಿಯಲ್ಲಿ ಔಷಧಗಳು ಮತ್ತು ಲಸಿಕೆಗಳ ಪೂರೈಕೆಯನ್ನು ಮಾಡಿದೆ. ಭಾರತವು ಕೋಟಿಗಟ್ಟಲೆ ಡಾಲರ್ ಗಳಿಸಬಹುದಿತ್ತು ಆದರೆ ಅದು ಮಾನವೀಯತೆಯ ವೆಚ್ಚದಲ್ಲಿ ಗಳಿಸಬಹುದು ಎಂದು ತೋರಿಸಿಕೊಟ್ಟಿದೆ ಎಂದರು.