ನವದೆಹಲಿ: ಪರಿಸರ ಮಾಲಿನ್ಯದಿಂದ ಭಾರತ ಮತ್ತು ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಗಿರುವ ಪರಿಸರ ಹಾನಿಯ ನಷ್ಟವನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ತುಂಬಿಕೊಡಬೇಕು ಎಂಬ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲು ಭಾರತ ಸಜ್ಜಾಗಿದೆ.
ಸದ್ಯದಲ್ಲೇ ನಡೆಯಲಿರುವ ವಿಶ್ವಸಂಸ್ಥೆಯ ಕಾಪ್ 26 ಪರಿಸರ ಸಮ್ಮೇಳದಲ್ಲಿ ಭಾರತ ಪ್ರಸ್ತಾಪಿಸಲಿದೆ ಎಂದು ಕೇಂದ್ರ ಪರಿಸರ ಖಾತೆಯ ಹಿರಿಯ ಅಧಿಕಾರಿ ರಾಮೇಶ್ವರಿ ಗುಪ್ತಾ ತಿಳಿಸಿದ್ದಾರೆ.
“ವಿಶ್ವಸಂಸ್ಥೆಯ ಈ ಸಮ್ಮೇಳನ ಸ್ಕಾಟ್ಲೆಂಡ್‌ನ ಗ್ಲಾಸ್ಗೋನಲ್ಲಿ ನಡೆಯಲಿದ್ದು, ಅದರಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪರಿಸರ ಮಾಲಿನ್ಯದಿಂದ ಆಗುತ್ತಿರುವ ಹಾನಿಯನ್ನು ತಡೆಯುವ ಬಗ್ಗೆ ಕಠಿಣ ನಿರ್ಧಾರಗಳನ್ನು ಈ ಸಮ್ಮೇಳನದಲ್ಲಿ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ, ಪರಿಸರ ಮಾಲಿನ್ಯದಿಂದ ಎಲ್ಲಾ ದೇಶಗಳಿಗೆ ಆಗಿರುವ ನಷ್ಟದ ಬಗ್ಗೆ ಚರ್ಚೆ ನಡೆಯಲಿದ್ದು, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈ ನಷ್ಟವನ್ನು ಕಡಿಮೆ ಆದಾಯವಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡುವಂತೆ ಮನವಿ ಮಾಡಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ
ಈ ಹಿಂದೆ, ಅಮೆರಿಕದ ಪರಿಸರ ಇಲಾಖೆಯ ಸಚಿವ ಜಾನ್ ಕೆರ್ರಿ ಅವರಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು ಎಂದು ಗುಪ್ತಾ ತಿಳಿಸಿದ್ದಾರೆ.
ಮುಂದಿನ ವಾರ ಮೋದಿ-ಪೋಪ್ ಭೇಟಿ
ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಕ್ರೈಸ್ತರ ಪರ ಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್‌ರನ್ನು ಭೇಟಿಯಾಗಲಿದ್ದಾರೆ. ರೋಮ್ ನಲ್ಲಿ ಅ.30-31ರಂದು ಜಿ-20 ಶೃಂಗದಲ್ಲಿ ಪಾಲ್ಗೊ ಳ್ಳಲಿರುವ ಪ್ರಧಾನಿ ಮೋದಿ, ಇದೇ 28ರಂದು ರಾತ್ರಿ ವ್ಯಾಟಿ ಕನ್‌ಗೆ ತೆರಳಿ ಪೋಪ್‌ರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿ-20 ಶೃಂಗದ ಬಳಿಕ ನೇರವಾಗಿ ಗ್ಲಾಸ್ಗೋಗೆ ತೆರಳಲಿರುವ ಪ್ರಧಾನಿ, ಕಾಪ್26 ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.