ಮುಂಬಯಿ: ವಾಂಖೇಡೆ ಕ್ರಿಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ಕ್ರಿಕೆಟ್ ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವನಿತಾ ತಂಡವು 7 ವಿಕೆಟುಗಳ ಗೆಲುವನ್ನು ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಕಿರು ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತದ ವನಿತೆಯರು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಇಂಗ್ಲಂಡ್ ವನಿತೆಯರು ಜೂಲಾನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ ಅವರ ಮಾರಕ ದಾಳಿಗೆ ಕಂಗೆಟ್ಟು 41.1 ಓವರುಗಳಲ್ಲಿ 161 ರನ್ನುಗಳಿಗೆ ಆಲೌಟ್ ಆಯಿತು. ಇವರಿಬ್ಬರೂ ತಲಾ 4 ವಿಕೆಟುಗಳನ್ನು ಪಡೆದು ಮಿಂಚಿದರು. ಪೂನಮ್ ಯಾದವ್ ಅವರು 2 ವಿಕೆಟ್ ಪಡೆದರು. ಇಂಗ್ಲಂಡ್ ಪರ ನಟಾಲಿ ಸ್ಕೀವರ್ ಅವರು ಸರ್ವಾಧಿಕ ಸ್ಕೋರರ್ ಆಗಿ ಮೂಡಿಬಂದರು. ಅವರು 109 ಎಸೆತಗಳಲ್ಲಿ 85 ರನ್ನುಗಳನ್ನು ಬಾರಿಸಿದರು.
ಗೆಲ್ಲಲು ಸುಲಭ ಸವಾಲನ್ನು ಪಡೆದ ಭಾರತದ ಪರ ಸ್ಮೃತಿ ಮಂದನ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದರು. 63 ರನ್ನುಗಳನ್ನು ಬಾರಿಸುವ ಮೂಲಕ ಸ್ಮೃತಿ ಅವರು ಏಕದಿನ ಕ್ರಿಕೆಟ್ ನಲ್ಲಿ 15ನೇ ಅರ್ಧಶತಕವನ್ನು ದಾಖಲಿಸಿದರು. ಮಿಥಾಲಿ ರಾಜ್ (47) ಮತ್ತು ಪೂನಮ್ ರಾವತ್ (32) ಜವಾಬ್ದಾರಿಯುತ ಆಟದ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು.