ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನಾ ಮುಖಾಮುಖೀ ಕಳೆದ ಜೂನ್ 16ರಿಂದಲೂ ಸಾಗಿದ್ದು ಸಮರ ಉದ್ವಿಗ್ನತೆಯನ್ನು ಸೃಷ್ಟಿಸಿರುವ ನಡುವೆಯೇ, ಚೀನದ ಸೇನಾ ವಿಶ್ಲೇಷಕರು “ಭಾರತ ಮತ್ತು ಚೀನ ಸರಕಾರಗಳು ಸಿಕ್ಕಿಂ ಗಡಿ ಕುರಿತಂತೆ ಈಗಿರುವ 1890ರ ಗ್ರೇಟ್ ಬ್ರಿಟನ್ – ಚೀನ ಒಪ್ಪಂದವನ್ನು ಬದಲಾಯಿಸಿ ಹೊಸ ಗಡಿ ಒಪ್ಪಂದಕ್ಕೆ ಸಹಿ ಹಾಕಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಚೀನದ ಮಟ್ಟಿಗೆ ಬೇಗನೆ ನಡೆಯಬೇಕಿರುವ ಬೆಳೆ ಕಟಾವು ಇದು. ನಾವು ಭಾರತದೊಂದಿಗೆ ಸಿಕ್ಕಿಂ ಗಡಿಗೆ ಸಂಬಂಧಿಸಿದಂತೆ ಹೊಸ ಒಪ್ಪಂದ ರೂಪಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ 1890ರ ಸಿಕ್ಕಿಂ ಗಡಿ ಒಪ್ಪಂದ ಏರ್ಪಟ್ಟದ್ದು ಚೀನ ಮತ್ತು ಗ್ರೇಟ್ ಬ್ರಿಟನ್ ನಡುವೆ; ಆಗಿನ್ನೂ ಭಾರತ ಸ್ವತಂತ್ರ ದೇಶವಾಗಿರಲಿಲ್ಲ…”
”….ಅದು ಸ್ವತಂತ್ರವಾದದ್ದು 1947ರಲ್ಲಿ. ಗ್ರೇಟ್ ಬ್ರಿಟನ್ – ಚೀನ ನಡುವೆ 1890ರಲ್ಲಿ ಸಿಕ್ಕಿಂ ಗಡಿ ಒಪ್ಪಂದ ಏರ್ಪಟ್ಟಿದ್ದಾಗ ಚೀನ ಇನ್ನೂ “ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ’ ಆಗಿರಲಿಲ್ಲ. ಆದುದರಿಂದ ಭಾರತ ಮತ್ತು ಚೀನ ಈ ಸಂದರ್ಭದಲ್ಲಿ ಸಿಕ್ಕಿಂ ಗಡಿ ಕುರಿತಂತೆ ತಮ್ಮೊಳಗೆ ಹೊಸ ಒಪ್ಪಂದವನ್ನು ರೂಪಿಸಿಕೊಂಡು ಅದಕ್ಕೆ ಸಹಿಹಾಕಬೇಕು. ಹೀಗೆ ಮಾಡಿದಲ್ಲಿ ಅದು ಚೀನದ ಮಟ್ಟಿಗಿನ ಕ್ಷಿಪ್ರ ಬೆಳೆ ಕಟಾವ್ ಆಗಿರುತ್ತದೆ” ಎಂದು ಅಕಾಡೆಮಿ ಆಫ್ ಮಿಲಿಟರಿ ಸಯನ್ಸ್‌ನ ಚೀನ-ಅಮೆರಿಕ ರಕ್ಷಣಾ ಬಾಂಧವ್ಯದ ಕೇಂದ್ರದ ನಿರ್ದೇಶಕರಾಗಿರುವ ಹಿರಿಯ ಕರ್ನಲ್ ಝಾವೋ ಕ್ಸಿಯಾವೋಝೋ ಅವರು ಭಾರತೀಯ ಮಾಧ್ಯಮದ ನಿಯೋಗದೊಂದಿಗೆ ಮಾತನಾಡುತ್ತಾ ಹೇಳಿದರು.
“ಗಡಿ ವಿವಾದ ಇತ್ಯರ್ಥ ಸಂಬಂಧವಾದ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳು ಸಿಕ್ಕಿಂ ವಲಯದಲ್ಲಿನ ಗಡಿಯನ್ನು ಸಮಕಾಲೀನ ಸ್ಥಿತಿಗತಿಗೆ ಅನುಗುಣವಾಗಿ, 1890ರ ಚೀನ – ಗ್ರೇಟ್ ಬ್ರಿಟನ್ ಸಿಕ್ಕಿಂ ಗಡಿ ಒಪ್ಪಂದವನ್ನು ಬದಲಾಯಿಸುವ ಮೂಲಕ ಹೊಸ ಒಪ್ಪಂದ ರೂಪಿಸಿಕೊಂಡು ಉಭಯ ದೇಶಗಳು ಅದಕ್ಕೆ ಸಹಿಹಾಕುವಂತೆ ಚರ್ಚಿಸಿದ್ದಾರೆ. ಅಂತೆಯೇ ಅಂತಹ ಹೊಸ ಒಪ್ಪಂದ ಆದಷ್ಟು ಬೇಗನೆ ಏರ್ಪಡಬೇಕಿದೆ” ಎಂದು ಕರ್ನಲ್ ಹೇಳಿದರು.
ಇದೇ ನೆಲೆಯಲ್ಲಿ ಚೀನ ವಿದೇಶ ಸಚಿವಾಲಯವು ತನ್ನ ಆಗಸ್ಟ್ 2ರ ಡೋಕ್‌ಲಾಂ ಮುಖಾಮುಖೀ ಕುರಿತ ಸತ್ಯ-ಪತ್ರದಲ್ಲಿ “ಸಿಕ್ಕಿಂ ಗಡಿ ವಲಯದಲ್ಲಿ “ಬೇಗನೆಯ ಕಟಾವ್’ ಕೈಗೊಳ್ಳುವ ಬೀಜಿಂಗ್‌ನ ನಿರೀಕ್ಷೆಯನ್ನು ಉಲ್ಲೇಖೀಸಿದೆ.