ನವದೆಹಲಿ: ಪೂರ್ವ ಲಡಾಖ್‌ನ ಗಡಿ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಭಾರತ-ಚೀನಾ ಹೊಸದಾಗಿ ಡಿ.20ರಂದು ಉನ್ನತ ಮಟ್ಟದ ಸೇನಾ ಮಾತುಕತೆ ನಡೆಸಿವೆ ಎಂದು ಉಭಯ ದೇಶಗಳು ಗುರುವಾರ ಜಂಟಿಯಾಗಿ ಬಿಡುಗಡೆಗೊಳಿಸಿದ ಹೇಳಿಕೆ ಮೂಲಕ ತಿಳಿಸಿವೆ.
“ಡಿ.20ರಂದು ಚೀನಾ ಭಾಗದ ಚುಶುಲ್-ಮೊಲ್ಡೊ ಗಡಿಯ ಸಭೆಯ ಸ್ಥಳದಲ್ಲಿ 17ನೇ ಸುತ್ತಿನ ಭಾರತ-ಚೀನಾ ಕಾಪ್ಸ್ì ಕಮಾಂಡರ್ ಮಟ್ಟದ ಸಭೆ ನಡೆಸಲಾಯಿತು. ಮುಕ್ತ ಮತ್ತು ರಚನಾತ್ಮಕ ರೀತಿಯಲ್ಲಿ ಪಶ್ಚಿಮ ವಲಯದ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಇರುವ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಎರಡೂ ಕಡೆಯಿಂದ ಮಾತುಕತೆ ನಡೆಯಿತು,’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
“ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಪುನಃಸ್ಥಾಪನೆ ನಿಟ್ಟಿನಲ್ಲಿ ಹಾಗೂ ಬಾಕಿ ಇರುವ ಸಮಸ್ಯೆಗಳು ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ಕಡೆಯವರು ನಿರಂತರ ಸಂಪರ್ಕದಲ್ಲಿರಲು ಹಾಗೂ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಮಾತುಕತೆ ನಡೆಸಲು ಒಪ್ಪಿವೆ,’ ಎಂದು ವಿವರಿಸಿದರು.
ಸದನದಲ್ಲಿ ಚರ್ಚೆಗೆ ಪಟ್ಟು:
ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿ ಚರ್ಚೆಯಾಗಬೇಕೆಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿವೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ, ಘೋಷಣೆಯಿಂದಾಗಿ ಸತತ 4 ಬಾರಿ ಕಲಾಪವನ್ನು ಮುಂದೂಡಲಾಯಿತು. ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರು ಕೊರೊನಾ ಸ್ಥಿತಿ ಕುರಿತು ಮಾತನಾಡುವಾಗಲೂ, ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತಲೇ ಇದ್ದರು. ಇನ್ನು, ರಾಜ್ಯಸಭೆಯಲ್ಲಿ ಚೀನಾ ಕುರಿತು ಚರ್ಚೆಗೆ ಅವಕಾಶ ಸಿಗದ ಕಾರಣ, ಎಲ್ಲ ಪ್ರತಿಪಕ್ಷಗಳೂ ದಿನದ ಮಟ್ಟಿಗೆ ಕಲಾಪ ಬಹಿಷ್ಕರಿಸಿ ಹೊರನಡೆದವು. ಅಧಿವೇಶನ ಆರಂಭವಾದಾಗಿನಿಂದಲೂ ಈ ಕುರಿತು ಚರ್ಚೆಯಾಗಬೇಕೆಂದು ಪ್ರತಿಪಕ್ಷಗಳ ಆಗ್ರಹಿಸುತ್ತಲೇ ಇವೆ.