ಬೆಳಗಾವಿ: ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ. ನೇತೃತ್ವವೂ ಇಲ್ಲ. ಜೊತೆಗೆ ಯಾವುದೇ ನೀತಿಯೂ ಇಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ವಾಗ್ಧಾಳಿ ನಡೆಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ನೀತಿ ಏನು ಎಂಬುದನ್ನು ನಿಮ್ಮ ಮಾತುಗಳೇ ಸಾಬೀತುಪಡಿಸುತ್ತವೆ. ರಾಹುಲ್ ಗಾಂಧಿ ಮೊಹಬ್ಬತ್ ಕೆ ದುಕಾನ್ ಬಗ್ಗೆ ಮಾತನಾಡುತ್ತಿದ್ದರು. ಅವರ ಈ ದುಕಾನ್‌ದಲ್ಲಿ ನಫರತ್‌ನ ಬಿಕರಿ ಆಗುತ್ತಿದೆ ಎಂದು ಟೀಕಿಸಿದರು.
Advertisement
ಬಿಜೆಪಿಯವರ ಮನೆ ಹಾಳಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ, ಅತಿ ಹೆಚ್ಚು ಜನರು ಮತ ಹಾಕಿದ, ಅತಿ ಹೆಚ್ಚು ಸಂಸದರು, ಶಾಸಕರು ನಾಶವಾಗಲಿ ಎಂದರೆ ಭಾರತವೇ ನಾಶವಾಗಲಿ ಎಂಬುದನ್ನು ಅವರು ಬಯಸಿದಂತೆ ಕಾಣುತ್ತದೆ ಎಂದು ವಿಶ್ಲೇಷಿಸಿದರು.
Related Articles
Advertisement
ನಮ್ಮ ಬಿಜೆಪಿ ಪಕ್ಷದ ನೀತಿ, ಪಕ್ಷದ ನೇತೃತ್ವ ನಮ್ಮ ಬದ್ಧತೆಯನ್ನು ತಿಳಿಸುತ್ತಿದೆ. ದೇಶ ಮೊದಲು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಮ್ಮ ನೀತಿ. ಬಡವರಿಗೆ ಬಲ ಕೊಡುವುದು ನಮ್ಮ ನೀತಿ. ಸಂವಿಧಾನದ ಆಶಯವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಿ ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವುದು ನಮ್ಮ ನೀತಿ ಎಂದು ತಿರುಗೇಟು ನೀಡಿದರು.
ಭಾರತ ಮತ್ತು ಭಾರತೀಯರನ್ನು ಸುರಕ್ಷಿತವಾಗಿಡುವುದು, ಜಗತ್ತಿನ ಮೊದಲ ಸ್ಥಾನದಲ್ಲಿ ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸುವುದು ನಮ್ಮ ನೀತಿ. ಇದಕ್ಕೆ ಅನುಗುಣವಾಗಿಯೇ ನಾವು ನಮ್ಮ ಸಾಧನೆ ತೋರಿಸಿದ್ದೇವೆ. 10 ವರ್ಷಗಳಲ್ಲಿ ತೆರಿಗೆಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನು ತರಲಾಗಿದೆ. ಅದರ ಪರಿಣಾಮವಾಗಿ ಜಿಡಿಪಿ ಬೆಳವಣಿಗೆ ಮೂಲಕ ಭಾರತವು ವಿಶ್ವದ 5ನೇ ಶಕ್ತಿಯಾಗಿ ಬದಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ್, ರಾಜ್ಯ ವಕ್ತಾರ ಎಂಬಿ ಜಿರಲಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಶರತ್ ಹೆಗಡೆ, ಎಫ್ ಎಸ್ ಸಿದ್ದನಗೌಡರ, ಬೆಳಗಾವಿ ಜಿಲ್ಲಾ ಮಾಧ್ಯಮ ಸಂಚಾಲಕ ಹನುಮಂತ ಕೊಂಗಾಲಿ, ಚಂದ್ರಕಾಂತ್ ಅವರು ಉಪಸ್ಥಿತರಿದ್ದರು. ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯ ಮೇಲೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಪ್ರಭಾವ ಬೀರುತ್ತದೆ. ಆದರೆ ಕಾಂಗ್ರೆಸ್ ಇದನ್ನು ಇಡೀ ಎನ್‌ಡಿಎ ಅಪರಾಧ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಸರ್ಕಾರವೇ ಎಸ್‌ಐಟಿ ರಚನೆ ಮಾಡಿದೆ. ತನಿಖೆಯಾಗಲಿ ಎಂದರು. ಮಹಿಳಾ ನ್ಯಾಯಾಧೀಶರ ತಂಡದಿಂದ ತನಿಖೆಯಾದರೆ ಆದಷ್ಟು ಬೇಗನೆ ಸತ್ಯಾಸತ್ಯತೆ ಹೊರ ಬರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಒಪ್ಪುತ್ತೇವೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ತನಿಖೆಗೂ ಮುನ್ನ ನಾವು ಯಾರನ್ನೂ ಅಪರಾಧಿ ಎಂದು ಘೋಷಣೆ ಮಾಡುವಂತಿಲ್ಲ. ತನಿಖೆ ನಂತರ ಸತ್ಯ ಏನು ಅನ್ನೋದು ಹೊರಬರುತ್ತದೆ ಎಂದು ಹೇಳಿದರು. ದೂರುದಾರರ ಹೇಳಿಕೆಯ ಪ್ರಕಾರ ಇದು ನಾಲ್ಕೈದು ವರ್ಷದ ಹಿಂದಿನ ಘಟನೆ. ಆಗ ಜನತಾದಳವು ಕಾಂಗ್ರೆಸ್ ಜೊತೆ ಇತ್ತು ಎಂಬುದನ್ನು ಕಾಂಗ್ರೆಸ್ ನವರು ಮರೆತಿದ್ದಾರೆ. ತನಿಖೆ ಆಗಲಿ, ಸತ್ಯ ಏನೆಂಬುದು ಹೊರಬರಲಿ ಎಂದು ಹೇಳಿದರು.