ಜೋಹರ್ (ಮಲೇಷ್ಯಾ): ಭಾರತೀಯ ಕಿರಿಯರ ಹಾಕಿ ತಂಡವು ಜೋಹರ್ ಕಪ್ ಹಾಕಿ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಭಾರತವು 5-1 ಗೋಲುಗಳಿಂದ ಜಪಾನ್ ತಂಡವನ್ನು ಭರ್ಜರಿಯಾಗಿ ಸೋಲಿಸಿದೆ.
ನಾಯಕ ಉತ್ತಮ್ ಸಿಂಗ್, ರೋಹಿತ್, ಜಾನ್ಸನ್ ಪುರ್ತಿ, ಬಾಬಿ ಸಿಂಗ್ ಧಮಿ ಮತ್ತು ಅಮನ್‌ದೀಪ್ ಲಾಕ್ರ ಅವರ ಗೋಲಿನ ನೆರವಿನಿಂದ ಭಾರತ ಅಮೋಘ ಗೆಲುವು ದಾಖಲಿಸಿತು. ಜಪಾನಿನ ಏಕೈಕ ಗೋಲನ್ನು ಇಕುಮಿ ಸಯಿಕಿ ಹೊಡೆದಿದ್ದರು.
ಪಂದ್ಯ ಸ್ವಲ್ಪ ತಡವಾಗಿ ಆರಂಭವಾದರೂ ಭಾರತ 5ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಲು ಯಶಸ್ವಿಯಾಯಿತು. ನಾಯಕ ಉತ್ತಮ್ ಜಪಾನಿನ ಗೋಲ್‌ಕೀಪರನ್ನು ವಂಚಿಸಿ ಗೋಲು ದಾಖಲಿಸಿದರು. ಆಬಳಿಕ ಜಪಾನ್ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು ಭಾರತಕ್ಕೆ ಬೆದರಿಕೆಯೊಡ್ಡಿತ್ತು. ಆದರೆ ಭಾರತದ ಅತ್ಯುತ್ತಮ ರಕ್ಷಣಾ ಆಟದಿಂದಾಗಿ ಎದುರಾಳಿಗೆ ಗೋಲು ಹೊಡೆಯಲು ಸಾಧ್ಯವಾಗಲೇ ಇಲ್ಲ.
ಜಪಾನ್ ನೀಡುತ್ತಿದ್ದ ಒತ್ತಡದ ನಡುವೆ ರೋಹಿತ್ 12ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಇನ್ನೊಂದು ಗೋಲು ಹೊಡೆದು ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಆದರೆ ಮೊದಲ ಕ್ವಾರ್ಟರ್ ಅವಧಿ ಮುಗಿಯುವಷ್ಟರಲ್ಲಿ ಜಪಾನ್ ಗೋಲನ್ನು ಹೊಡೆದು ಅಂತರವನ್ನು 2-1ಕ್ಕೆ ಇಳಿಸಿತು. ದ್ವಿತೀಯ ಕ್ವಾರ್ಟರ್ ಅವಧಿಯಲ್ಲಿ ಉಭಯ ತಂಡಗಳ ಆಟಗಾರರು ಗೋಲು ಹೊಡೆಯಲು ಬಹಳಷ್ಟು ಒದ್ದಾಡಿದರು. 21ನೇ ನಿಮಿಷದಲ್ಲಿ ಜಾನ್ಸನ್ ಪುರ್ತಿ ಗೋಲನ್ನು ಹೊಡೆದು ಭಾರತದ ಮುನ್ನಡೆಯನ್ನು 3-1ಕ್ಕೇರಿಸಿದರು.
ದ್ವಿತೀಯ ಸ್ಥಾನದಲ್ಲಿ ಭಾರತ: ಭಾರತ ಇಷ್ಟರವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಭಾರತವು ತನ್ನ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆಸ್ಟ್ರೇಲಿಯ ಇಷ್ಟರವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಜಪಾನ್ ತಲಾ ಒಂದರಲ್ಲಿ ಗೆದ್ದು ಅನಂತರದ ಸ್ಥಾನದಲ್ಲಿದೆ. ಆತಿಥೇಯ ಮಲೇಷ್ಯಾ ಆಡಿದ ಎರಡು ಪಂದ್ಯಗಳಲ್ಲಿ ಸೋತಿದೆ.