Advertisement

ರೋಹಿತ್ ಭರ್ಜರಿ ಶತಕ ; ಕೊಹ್ಲಿ ಕ್ಯಾಪ್ಟನ್ ನಾಕ್ ; ಆಸೀಸ್ ವಿರುದ್ಧ ಭಾರತಕ್ಕೆ ಸರಣಿ ಜಯ

10:00 AM Jan 20, 2020 | Hari Prasad |

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಏಕದಿನ ಪಂದ್ಯವನ್ನು ಭಾರತ 07 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-1ರಿಂದ ಗೆಲ್ಲುವ ಮೂಲಕ ‘ಪೇಟಿಯಂ ಸರಣಿ’ಯನ್ನು ಭಾರತ ತನ್ನದಾಗಿಸಿಕೊಂಡಿದೆ.

Advertisement

ಆರಂಭಿಕ ಆಟಗಾರ ರೋಹಿತ್ ಶರ್ಮಾ (119) ಅವರ ಭರ್ಜರಿ ಶತಕ ಮತ್ತು ಕಪ್ತಾನ ವಿರಾಟ್ ಕೊಹ್ಲಿ (89) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಆಸ್ಟ್ರೇಲಿಯಾ ನೀಡಿದ 286 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಟೀಂ ಇಂಡಿಯಾ ಚಿನ್ನಸ್ವಾಮಿಯಲ್ಲಿ ಸರಣಿ ಗೆಲುವಿನ ನಗುವನ್ನು ಬೀರಿತು. ಅಂತಿಮವಾಗಿ ಶ್ರೇಯಸ್ ಅಯ್ಯರ್ (ಅಜೇಯ 44) ಸಾಹಸದಿಂದ ಭಾರತವು 47.3 ಓವರ್ ಗಳಲ್ಲಿ 03 ವಿಕೆಟ್ ಗಳನ್ನು ಕಳೆದುಕೊಂಡು 289 ರನ್ ಗಳಿಸುವ ಮೂಲಕ ಗೆದ್ದು ಬೀಗಿತು.

ಭರ್ಜರಿ ಶತಕ ದಾಖಲಿಸುವ ಮೂಲಕ ಭಾರತದ ಗೆಲುವಿಗೆ ಉತ್ತಮ ಆರಂಭ ಒದಗಿಸಿಕೊಟ್ಟ ರೋಹಿತ್ ಶರ್ಮಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟಿಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ (ಮೂರು ಪಂದ್ಯಗಳಿಂದ 183 ರನ್) ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ಈ ಸರಣಿಯಲ್ಲಿ ಮೂರನೇ ಸಲ ಟಾಸ್ ಗೆಲ್ಲುವ ಅವಕಾಶವನ್ನು ಪಡೆದ ಆಸೀಸ್ ಕಪ್ತಾನ ಆರೋನ್ ಫಿಂಚ್ ಅವರು ಚಿನ್ನಸ್ವಾಮಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಒಂದು ಹಂತದಲ್ಲಿ 46 ರನ್ನಿಗೆ 02 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ ಅನುಭವಿ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ (131) ಅವರ ಭರ್ಜರಿ ಶತಕ ಆಸರೆಯಾಯಿತು.

ಯುವ ಬ್ಯಾಟ್ಸ್ ಮನ್ ಲಬುಶೇನ್ ಅವರ 54 ರನ್ ಮತ್ತು ಸ್ಮಿತ್ ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 50 ಓವರುಗಳಲ್ಲಿ 09 ವಿಕೆಟ್ ಗಳನ್ನು ಕಳೆದುಕೊಂಡು 286 ರನ್ ಗಳನ್ನು ಕಲೆಹಾಕಿತು.



ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಅನುಭವಿ ವೇಗಿ ಮಹಮ್ಮದ್ ಶಮಿ ಅವರು 04 ವಿಕೆಟ್ ಪಡೆದು ಮಿಂಚಿದರು. ರಾಜ್ ಕೋಟ್ ಪಂದ್ಯದಲ್ಲೂ ಮಿತವ್ಯಯಿ ಆಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ 10 ಓವರ್ ಗಳಲ್ಲಿ ಕೇವಲ 38 ರನ್ ನೀಡಿ ಆಸೀಸ್ ಬ್ಯಾಟ್ಸ್ ಮನ್ ಗಳಿಗೆ ಕಬ್ಬಿಣದ ಕಡಲೆಯಾದರು. ರವೀಂದ್ರ ಜಡೇಜಾ 02 ವಿಕೆಟ್ ಪಡೆದರೆ, ನವದೀಪ್ ಸೈನಿ ಮತ್ತು ಕುಲದೀಪ್ ಯಾದವ್ ತಲಾ 01 ವಿಕೆಟ್ ಪಡೆದರು.


ಈ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಶತಕವೀರ ರೋಹಿತ್ ಶರ್ಮಾ (119) ಅವರು ಆಸರೆಯಾದರು. ಗಾಯಾಳು ಧವನ್ ಬದಲಿಗೆ ರೋಹಿತ್ ಅವರ ಜೊತೆ ಇನ್ನಿಂಗ್ಸ್ ಅರಂಭಿಸಲು ಬಂದ ಕೆ.ಎಲ್. ರಾಹುಲ್ (19) ತವರಿನ ಅಂಗಳದಲ್ಲಿ ಸಿಡಿಯಲು ವಿಫಲರಾದರು. ಆದರೆ ನಾಯಕ ಕೊಹ್ಲಿ ಮತ್ತು ರೋಹಿತ್ ಸೇರಿಕೊಂಡು ಭಾರತವನ್ನು ಗೆಲುವಿನ ದಡ ಕಾಣಿಸಲು ಹೋರಾಡಿದರು. ಇವರಿಬ್ಬರ ನಡುವಿನ 137 ರನ್ ಗಳ ಜೊತೆಯಾಟ ಭಾರತದ ಸರಣಿ ಗೆಲುವಿನಲ್ಲಿ ನಿರ್ಣಾಯಕವೆಣಿಸಿತು.


128 ಎಸೆತಗಳಲ್ಲಿ 06 ಭರ್ಜರಿ ಸಿಕ್ಸರ್ ಹಾಗೂ 08 ಬೌಂಡರಿ ನೆರವಿನಿಂದ 119 ರನ್ ಗಳಿಸಿದ ರೋಹಿತ್ ಶರ್ಮಾ ಔಟಾದ ಬಳಿಕ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ (ಅಜೇಯ 44) ಜೊತೆ ಸೇರಿಕೊಂಡು ನಾಯಕ ಕೊಹ್ಲಿ ಆಸೀಸ್ ದಾಳಿಯನ್ನು ಬೆಂಡೆತ್ತುತ್ತಾ ಸಾಗಿದರು. ಈ ಜೋಡಿ ಕೇವಲ 8.4 ಎಸೆತಗಳಲ್ಲಿ 68 ರನ್ ಸಿಡಿಸಿ ತಂಡದ ಗೆಲುವನ್ನು ಸರಾಗಗೊಳಿಸಿದರು.

Advertisement


46ನೇ ಓವರಿನಲ್ಲಿ 89 ರನ್ ಗಳಿಸಿದ್ದ ಕೊಹ್ಲಿ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಮತ್ತು ಮನೀಸ್ ಪಾಂಡೆ (ಅಜೇಯ 08) ಸೇರಿಕೊಂಡು ಇನ್ನೂ 2.3 ಓವರ್ ಗಳು ಬಾಕಿ ಇರುವಂತೆಯೇ ತಂಡಕ್ಕೆ ಅಮೂಲ್ಯ ಗೆಲುವು ದೊರಕಿಸಿಕೊಟ್ಟರು.


ಭಾರತದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಲು ನಾಯಕ ಫಿಂಚ್ 07 ಬೌಲರ್ ಗಳನ್ನು ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದ್ದುದರಲ್ಲಿ ಆ್ಯಸ್ಟನ್ ಅಗರ್ (10 ಓವರ್ 38 ರನ್ 01 ವಿಕೆಟ್) ಮತ್ತು ಸ್ಪಿನ್ನರ್ ಆ್ಯಡಂ ಝಂಪಾ (10 ಓವರ್ 44 ರನ್ 01 ವಿಕೆಟ್) ಮಾತ್ರವೇ ಮಿತವ್ಯಯಿಗಳೆಣಿಸಿಕೊಂಡರು. ಇನ್ನೋರ್ವ ಮಧ್ಯಮ ವೇಗಿ ಜೋಶ್ ಹ್ಯಾಝಲ್ ವುಡ್ 01 ಮೇಡನ್ ಓವರ್ ಸಹಿತ 5.78 ಸರಾಸರಿಯಲ್ಲಿ ರನ್ ನೀಡಿ 01 ವಿಕೆಟ್ ಪಡೆದರು.


ಪ್ರವಾಸಿಗರ ವಿರುದ್ಧ ಮುಂಬಯಿಯಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯವನ್ನು 10 ವಿಕೆಟ್ ಗಳಿಂದ ಕಳೆದುಕೊಂಡಿದ್ದ ಕೊಹ್ಲಿ ಪಡೆ ಬಳಿಕ ರಾಜ್ ಕೋಟ್ ನಲ್ಲಿ ನಡೆದಿದ್ದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 36 ರನ್ ಗಳಿಂದ ಗೆದ್ದುಕೊಂಡಿತ್ತು. ಹಾಗಾಗಿ ಬೆಂಗಳೂರಿನ ಇಂದಿನ ಮೂರನೇ ಏಕದಿನ ಪಂದ್ಯಕ್ಕೆ ‘ಫೈನಲ್’ ಮಹತ್ವ ಬಂದಿತ್ತು.







Advertisement

Udayavani is now on Telegram. Click here to join our channel and stay updated with the latest news.

Next