Advertisement

Cricket ದಾಖಲೆಯ ಹೊಸ್ತಿಲಲ್ಲಿ ಭಾರತ-ಬಾಂಗ್ಲಾ ಸರಣಿ

01:48 AM Sep 17, 2024 | Team Udayavani |

ಮುಂಬರುವ ಭಾರತ-ಬಾಂಗ್ಲಾ ದೇಶ ನಡುವಿನ ಟೆಸ್ಟ್‌ ಸರಣಿ ಅನೇಕ ದಾಖಲೆಗಳನ್ನು ತೆರೆದಿಡಲು ಸಜ್ಜಾಗಿದೆ. ತಂಡ ಹಾಗೂ ವೈಯಕ್ತಿಕ ಸಾಧನೆಗಳ ಮೂಲಕ ಈ ಸರಣಿ ಕುತೂಹಲ ಹುಟ್ಟಿಸಿದೆ. ಇಂಥ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Advertisement

ಗೆಲುವು-ಸೋಲು ಸಮ ಸಮ
1932ರಲ್ಲಿ ಟೆಸ್ಟ್‌ ಮಾನ್ಯತೆ ಪಡೆ ದಂದಿನಿಂದಲೂ ಭಾರತದ ಸೋಲಿನ ಸಂಖ್ಯೆ ಗೆಲುವಿಗಿಂತ ಜಾಸ್ತಿಯೇ ಇದೆ. ಒಮ್ಮೆಯೂ ಗೆಲುವು “ಸೋಲಿನ ಗಡಿ’ ದಾಟಿ ಮುನ್ನಡೆದದ್ದಿಲ್ಲ. ಇದೀಗ ಗೆಲುವು-ಸೋಲುಗಳ ದಾಖಲೆ ಸಮನಾಗಿದೆ (178). ಸೋಲನ್ನು ಮೀರಿ ನಿಲ್ಲುವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.

ಕೊಹ್ಲಿ 9 ಸಾವಿರ ರನ್‌
ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಕ್ಲಬ್‌ ಸೇರಲು ಇನ್ನು ಕೇವಲ 152 ರನ್‌ ಮಾಡಿದರೆ ಸಾಕು. ಆಗ ಅವರು 9 ಸಾವಿರ ರನ್‌ ಗಳಿಸಿದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್‌ ತೆಂಡುಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265) ಮತ್ತು ಸುನೀಲ್‌ ಗಾವಸ್ಕರ್‌ (10,122).

ರಹೀಂ 6 ಸಾವಿರ ರನ್‌
ಬಾಂಗ್ಲಾದ ಸೀನಿಯರ್‌ ಬ್ಯಾಟರ್‌ ಮುಶ್ಫಿಕರ್‌ ರಹೀಂ ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ ಗಡಿಯಲ್ಲಿ ನಿಂತಿದ್ದಾರೆ. ಇದಕ್ಕೆ ಬೇಕಿರುವುದಿನ್ನು 108 ರನ್‌ ಮಾತ್ರ. ಆಗ ರಹೀಂ ಬಾಂಗ್ಲಾ ಪರ ಈ ಮೈಲುಗಲ್ಲು ನೆಟ್ಟ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಭಾಜನರಾಗಲಿದ್ದಾರೆ.

ಜಡೇಜ 300 ವಿಕೆಟ್‌
ಆಲ್‌ರೌಂಡರ್‌ ರವೀಂದ್ರ ಜಡೇಜ 300 ಟೆಸ್ಟ್‌ ವಿಕೆಟ್‌ಗಳಿಂದ ಸ್ವಲ್ಪವೇ ದೂರದಲ್ಲಿದ್ದಾರೆ. ಅವರಿನ್ನು 6 ವಿಕೆಟ್‌ ಉರುಳಿಸಿದರೆ ಸಾಕು. ಆಗ 300 ವಿಕೆಟ್‌ ಕೆಡವಿದ ಭಾರತದ 6ನೇ ಬೌಲರ್‌ ಆಗಲಿದ್ದಾರೆ. ಹಾಗೆಯೇ 300 ವಿಕೆಟ್‌ ಪ್ಲಸ್‌ 3 ಸಾವಿರ ರನ್‌ ಸಾಧನೆಗೈದ ವಿಶ್ವದ 11ನೇ, ಭಾರತದ 2ನೇ ಸವ್ಯಸಾಚಿಯಾಗಲಿದ್ದಾರೆ. ಕಪಿಲ್‌ದೇವ್‌ ಮತ್ತು ಅಶ್ವಿ‌ನ್‌ ಉಳಿದಿಬ್ಬರು.

Advertisement

ತೈಜುಲ್‌ ಇಸ್ಲಾಮ್‌ 200 ವಿಕೆಟ್‌
ಬಾಂಗ್ಲಾದ ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಮ್‌ 200 ವಿಕೆಟ್‌ ಪೂರ್ತಿಗೊಳಿಸಲು ಐದೇ ವಿಕೆಟ್‌ ಉರುಳಿಸಬೇಕಿದೆ. ಆಗ ಈ ಸಾಧನೆಗೈದ ಬಾಂಗ್ಲಾದ 2ನೇ ಕ್ರಿಕೆಟಿಗನಾಗಲಿದ್ದಾರೆ. ಶಕಿಬ್‌ ಅಲ್‌ ಹಸನ್‌ ಮೊದಲಿಗ (245 ವಿಕೆಟ್‌).

ಮೊದಲ ಜಯದ ನಿರೀಕ್ಷೆ

ಬಾಂಗ್ಲಾದೇಶ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ ಭಾರತವನ್ನು ಸೋಲಿಸಿಲ್ಲ. ಆಡಿದ 13 ಪಂದ್ಯಗಳಲ್ಲಿ 11 ಸೋಲನುಭವಿಸಿದೆ. 2 ಡ್ರಾ ಆಗಿವೆ. ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಮಾಡಿದ ಕಾರಣ ಈ ಬಾರಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

27 ಸಾವಿರ ರನ್‌ ಗಡಿಯಲ್ಲಿ ಕೊಹ್ಲಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಸಾವಿರ ರನ್‌ ಪೂರೈಸಲು ವಿರಾಟ್‌ ಕೊಹ್ಲಿ ಅವರಿಗೆ ಕೇವಲ 58 ರನ್‌ ಅಗತ್ಯವಿದೆ. ಆಗ ಅವರು ಅತೀ ವೇಗದಲ್ಲಿ ಈ ಗಡಿ ತಲುಪಿದ ಕ್ರಿಕೆಟಿಗನಾಗಲಿದ್ದಾರೆ. ದಾಖಲೆ ತೆಂಡುಲ್ಕರ್‌ ಹೆಸರಲ್ಲಿದೆ (623 ಇನ್ನಿಂಗ್ಸ್‌). ಕೊಹ್ಲಿ ಸದ್ಯ 591 ಇನ್ನಿಂಗ್ಸ್‌ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next