Advertisement

ಆತಂಕ ಪರಿಹಾರಕ್ಕೆ ಭಾರತ-ಚೀನಾ ಸೇನಾ ನೆಲೆಗಟ್ಟಿನಲ್ಲಿ ಮಾತುಕತೆ

04:01 AM May 22, 2020 | Hari Prasad |

ಹೊಸದಿಲ್ಲಿ: ಭಾರತ ಮತ್ತು ಚೀನ ಸೈನಿಕರ ನಡುವೆ ಎದ್ದಿದ್ದ ಅಹಿತಕರ ಸನ್ನಿವೇಶಗಳ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಭಾರತ ಮುಂದಾಗಿದೆ.

Advertisement

ಇತ್ತೀಚೆಗೆ, ಪೂರ್ವ ಲಡಾಖ್‌ನಲ್ಲಿ ಹಾಗೂ ಸಿಕ್ಕಿಂನ ಉತ್ತರ ಭಾಗದಲ್ಲಿರುವ ‘ನಕುಲಾ’ದಲ್ಲಿ ಉಭಯ ದೇಶಗಳ ಸೈನಿಕರು ಗಡಿ ವಿಚಾರದಲ್ಲಿ ಒಬ್ಬರನ್ನೊಬ್ಬರು ಬೈದಾಡಿಕೊಂಡು ಕೈ ಕೈ ಮಿಲಾಯಿಸಿದ ನಂತರ ಎದ್ದಿರುವ ಆತಂಕದ ಛಾಯೆಯನ್ನು ನಿವಾರಿಸಲು ಎರಡೂ ರಾಷ್ಟ್ರಗಳು ಪ್ರಯತ್ನಿಸುತ್ತಿವೆ.

ಮಂಗಳವಾರ, ಬುಧವಾರದಂದು ಪೂರ್ವ ಲಡಾಖ್‌ನಲ್ಲಿರುವ ಚುಶುಲ್‌-ಮೊಲ್ಡೊ ಹಾಗೂ ದೌಲತ್‌ ಬೆಗ್‌ ಓಲ್ಡೀ (ಡಿಬಿಒ) – ಟೈಯೆನ್‌ ವೇಯ್ನ್ ಡಿಯೆನ್‌ (ಟಿಡಬ್ಲ್ಯುಡಿ) ಗಡಿ ಭಾಗಗಳಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆಸಲಾಗಿದೆ. ಸಮಸ್ಯೆ ಇತ್ಯರ್ಥಕ್ಕಾಗಿ ಎರಡೂ ದೇಶಗಳು ಇಷ್ಟೆಲ್ಲಾ ಪ್ರಯತ್ನಪಟ್ಟಿದ್ದರೂ, ಯಾವುದೇ ಸಕಾರಾತ್ಮಕ ಫ‌ಲಿತಾಂಶಗಳು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘ಕಳೆದ ವರ್ಷ, ಎರಡೂ ದೇಶಗಳ ಗಡಿ ಪ್ರದೇಶದಲ್ಲಿ ಭಾರತವು ತನ್ನ ಸೀಮೆಯೊಳಗೆ 255 ಕಿ.ಮೀ. ದೂರದ ಡರ್ಬುಕ್‌ – ಶಿಯೊಂಕ್‌ – ಡಿಬಿಒ ರಸ್ತೆಯನ್ನು ನಿರ್ಮಿಸಿದ್ದು ಚೀನದ ಹೊಟ್ಟೆಯುರಿಗೆ ಕಾರಣವಾಗಿದೆ. ಭಾರತವು ಈ ರಸ್ತೆ ತನ್ನ ವ್ಯಾಪ್ತಿಯಲ್ಲಿ ಇರುವುದಾಗಿ ಸ್ಪಷ್ಟನೆ ನೀಡಿದ್ದರೂ ಚೀನ ತನ್ನ ಕ್ಯಾತೆಗಳನ್ನು ಬಿಟ್ಟಿಲ್ಲ’.

ಭಾರತ, ಡರ್ಬುಕ್‌-ಶಿಯೊಂಕ್‌-ಡಿಬಿಒ ರಸ್ತೆಯಿಂದ ಹೊಸತಾಗಿ, ಶಿಯೋಂಗ್‌ ಹಾಗೂ ಗಾಲ್ವಾನ್‌ ನದಿಗಳ ಮಧ್ಯೆ ಹೊಸ ರಸ್ತೆಯೊಂದನ್ನು ನಿರ್ಮಿಸುತ್ತಿದೆ ಎಂದು ಚೀನ ಆರೋಪಿಸಿದೆ. ಇದೇ ಇತ್ತೀಚಿನ ಸಿಕ್ಕಿಂ, ಲಡಾಖ್‌ ಗಲಾಟೆಗಳಿಗೆ ಕಾರಣ.

Advertisement

ಇದು ಸಾಲದೆಂಬಂತೆ, ಭಾರತ – ಚೀನ ಗಡಿಯಲ್ಲಿ ಭಾರತಕ್ಕೆ ಸಮೀಪದ ಎಸ್‌ಎಸ್‌ಎನ್‌ ಸಬ್‌ಸೆಕ್ಟರ್‌ನಲ್ಲಿ ತನ್ನ ಸೈನಿಕರಿಗಾಗಿ 60-70 ಬಿಡಾರಗಳನ್ನು ರಚಿಸಿದೆ. ಇದೇ ವೇಳೆ ಭಾರತದ ಪಡೆಗಳು ಲಡಾಖ್‌ ಮತ್ತು ಸಿಕ್ಕಿಂನಲ್ಲಿ ಚೀನ ಪ್ರದೇಶವನ್ನು ಆಕ್ರಮಿಸಿವೆ ಎಂಬ ಆರೋಪವನ್ನು ವಿದೇಶಾಂಗ ಇಲಾಖೆ ಗುರುವಾರ ತಿರಸ್ಕರಿಸಿದೆ. ಚೀನದ ಕಡೆಯಿಂದಲೇ ಹಲವು ಚಟುವಟಿಕೆಗಳು ಗಡಿ ಪ್ರದೇಶದಲ್ಲಿ ನಡೆದಿದ್ದವು ಎಂದು ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

ಅಮೆರಿಕ ಮಧ್ಯಪ್ರವೇಶ
ಕೋವಿಡ್ ವಿಚಾರದಲ್ಲಿ ಚೀನ ವಿರುದ್ಧ ಹರಿಹಾಯುತ್ತಿರುವ ಅಮೆರಿಕ ಈಗ ಕರೆಯದಿದ್ದರೂ ಭಾರತದ ಬೆಂಬಲಕ್ಕೆ ಬಂದು ನಿಂತಿದೆ. ಗಡಿ ವಿಚಾರದಲ್ಲಿ ಭಾರತದ ಕಡೆಗೆ ಬೆರಳು ತೋರುತ್ತಿರುವ ಚೀನವನ್ನು ತರಾಟೆಗೆ ತೆಗೆದುಕೊಂಡಿರುವ ಅಮೆರಿಕದ “ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ವ್ಯವಹಾರಗಳ ಬ್ಯೂರೋದ ಮುಖ್ಯಸ್ಥೆ ಆ್ಯಲೀಸ್‌ ವೆಲ್ಸ್‌,”ದಕ್ಷಿಣ ಚೀನ ಸಮುದ್ರದ ಮೇಲಾಗಲೀ, ಭಾರತದ ಗಡಿಯಲ್ಲಾಗಲೀ ಚೀನ ತೋರುತ್ತಿರುವ ಉದ್ಧಟತನವನ್ನು ಅಮೆರಿಕ ಎಚ್ಚರಿಕೆಯಿಂದ ಗಮನಿಸುತ್ತಿದೆ. ಇಂಥ ವಿಚಾರಗಳಲ್ಲಿ ಚೀನ ಆಡುವ ಜಾಣತನದ ಮಾತುಗಳನ್ನು ನಾವು ಪರಿಗಣಿಸುವುದಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next