Advertisement

ಸ್ವತಂತ್ರ ಶಾಸಕ ರವಿ ರಾಣಾ ಬಿಜೆಪಿ ತೆಕ್ಕೆಗೆ?

09:44 AM Jun 26, 2019 | Team Udayavani |

ಮುಂಬಯಿ: ಸ್ವತಂತ್ರ ಶಾಸಕ ರವಿ ರಾಣಾ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವ ಸಾಧ್ಯತೆಯಿದೆ.

Advertisement

ರಾಣಾ ಅವರ ಪತ್ನಿ ನವನೀತ್‌ ಕೌರ್‌ ರಾಣಾ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬೆಂಬಲದೊಂದಿಗೆ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ಕಳೆದ ಶನಿವಾರ ರಾಣಾ ದಂಪತಿ ದಿಲ್ಲಿಯಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್‌ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ಇದರಿಂದ ರಾಜಕೀಯ ವಲಯದಲ್ಲಿ ರವಿ ರಾಣಾ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಕಾವು ಸಿಕ್ಕಿದಂತಾಗಿದೆ.

ರಾಣಾ ಅವರು ಅಮರಾವತಿ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಾನು ಶಾ ಅವರನ್ನು ಭೇಟಿಯಾದೆ ಎಂದು ಹೇಳಿದ್ದಾರೆ. ನಮ್ಮ ಮುಂದಿನ ನಡೆಯನ್ನು ನಾವು ಇನ್ನಷ್ಟೇ ನಿರ್ಧರಿಸಬೇಕಿದೆ. ಆದರೆ ಬದಲಾವಣೆ ಆಗುತ್ತಲೇ ಇರುತ್ತದೆ ಎಂದವರು ನುಡಿದಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆ ಗೊಂಡಿರುವ ತಮ್ಮ ಹಿರಿಯ ನಾಯಕರಾದ ರಾಧಾಕೃಷ್ಣ ವಿಖೆ ಪಾಟೀಲ್‌ (ಕಾಂಗ್ರೆಸ್‌) ಮತ್ತು ಜಯದತ್ತ ಕ್ಷೀರ್‌ಸಾಗರ್‌ (ಎನ್‌ಸಿಪಿ) ಅವರ ಪಕ್ಷಾಂತರದ ಅನಂತರ ರಾಣಾ ಬಿಜೆಪಿಗೆ ಸೇರಿಕೊಂಡರೆ ಅದು ವಿಪಕ್ಷಗಳಿಗೆ ಮತ್ತೂಂದು ಆಘಾತವಾಗಲಿದೆ.

Advertisement

ರಾಣಾ ಅವರು ಸ್ಥಾಪಿಸಿದ ಯುವ ಸ್ವಾಭಿಮಾನಿ ಪಕ್ಷ (ವೈಎಸ್‌ಪಿ) ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟಕ್ಕೆ ಸೇರಿಕೊಂಡು ಅಮರಾವತಿ ಸ್ಥಾನವನ್ನು ಪಡೆದುಕೊಂಡಿತು. ಕ್ಷೇತ್ರದಲ್ಲಿ ರಾಣಾ ಅವರ ಪತ್ನಿ ಮತ್ತು ಮಾಜಿ ತೆಲುಗು ನಟಿ ನವನೀತ್‌ ಕೌರ್‌ ರಾಣಾ ಅವರು ಶಿವಸೇನೆಯ ಆನಂದ್‌ರಾವ್‌ ಅಡ್ಸುಲ್‌ ಅವರನ್ನು ಸೋಲಿಸಿ ಸಂಸದರಾಗಿದ್ದಾರೆ.

ದಿಲ್ಲಿ ನಿವಾಸದಲ್ಲಿ ಶಾ ಅವರೊಂದಿಗಿನ ದಂಪತಿಗಳ ಈ ಸಭೆಯನ್ನು ವಿಧಾನಸಭೆ ಚುನಾವಣೆಗೆ ಮೊದಲು ರಾಣಾ ಅವರನ್ನು ಪಕ್ಷದ ಮಡಿಲಿಗೆ ಸೇರಿಸಲು ಬಿಜೆಪಿಯ ಪ್ರಯತ್ನದ ದೃಷ್ಟಿಯಿಂದ ನೋಡ ಲಾಗುತ್ತಿದೆ. ರಾಣಾ ಅವರ ಪಕ್ಷವು ಪಶ್ಚಿಮ ವಿದರ್ಭದ ಕೆಲವು ಭಾಗಗಳಲ್ಲಿ ಪ್ರಭಾವವನ್ನು ಹೊಂದಿದೆ.

ನಾವು ಅಮರಾವತಿಗೆ ವಿಮಾನ ನಿಲ್ದಾಣವನ್ನು ಪಡೆಯಲು ಬಯಸಿದ್ದೇವೆ. ಅಲ್ಲದೆ, ನಾವು ಮಹಿಳೆ ಯರಿಗಾಗಿ ಸ್ವತಂತ್ರ ಪೊಲೀಸ್‌ ಠಾಣೆಗಳನ್ನು ಕೂಡ ಬಯಸುತ್ತೇವೆ. ಈ ಎಲ್ಲ ವಿಷಯಗಳನ್ನು ಬಿಜೆಪಿ ಅಧ್ಯಕ್ಷರ ಜತೆಗಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ರಾಣಾ ಹೇಳಿದ್ದಾರೆ.

ನವನೀತ್‌ ಕೌರ್‌ ರಾಣಾ ಅವರು 2014ರ ಲೋಕಸಭಾ ಚುನಾವಣೆಯಲ್ಲೂ ಅಮರಾವತಿ ಯಿಂದ ಎನ್‌ಸಿಪಿ ಅಭ್ಯರ್ಥಿಯಾಗಿದ್ದರು, ಆದರೆ ಅಡ್ಸುಲ್‌ ವಿರುದ್ಧ ಸೋತಿದ್ದರು. ಅದೇ ವರ್ಷದಲ್ಲಿ ಬದ್ನೇರಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿ ಚುನಾಯಿತರಾದ ರವಿ ರಾಣಾ ಅವರು ದೇವೇಂದ್ರ ಫಡ್ನವೀಸ್‌ ನೇತೃತ್ವದ ಬಿಜೆಪಿ ಸರಕಾರಕ್ಕೆ ತಮ್ಮ ಬೆಂಬಲ ಘೋಷಿಸಿದ್ದರು. ಆದಾಗ್ಯೂ, ಎನ್‌ಸಿಪಿ ಈ ರಾಜಕೀಯ ಬೆಳವಣಿಗೆಯನ್ನು ತಳ್ಳಿಹಾಕಿದೆ.

ರಾಣಾ ಬೆಂಬಲ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌-ಎನ್‌ಸಿಪಿಯಿಂದ ಬೆಂಬಲ ಸಿಕ್ಕಿದ್ದರೂ ನವನೀತ್‌ ಕೌರ್‌- ರಾಣಾ ಅವರು ಸ್ವತಂತ್ರ ಸಂಸದೆ ಆಗಿದ್ದಾರೆ. ರಾಣಾ ಈಗಾಗಲೇ ಫಡ್ನವೀಸ್‌ ನೇತೃತ್ವದ ಸರಕಾರವನ್ನು ಬೆಂಬಲಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಮಾಧವ್‌ ಭಂಡಾರಿ ಅವರು ನುಡಿದಿದ್ದಾರೆ.

ಕೌರ್‌ ಸಂಸದೆ ಮತ್ತು ಶಾ ಅವರು ಈಗ ಕೇಂದ್ರ ಗೃಹ ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಅವರು ಸಚಿವರನ್ನು ಭೇಟಿಯಾಗಬೇಕಾಗುತ್ತದೆ. ಈ ಬಗ್ಗೆ ನಾವು ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯಾಗುವುದಿಲ್ಲ ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next