Advertisement

ಸ್ವಾತಂತ್ರ್ಯೋತ್ಸವದ ಮೆಲುಕು…

09:25 PM Aug 14, 2020 | Karthik A |

1947ರಿಂದ ಆಗಸ್ಟ್‌ 15 ಅನ್ನು ನಾವು ಸ್ವಾತಂತ್ರ್ಯ ದಿನವಾಗಿ ಬಹಳ ಅದ್ಧೂರಿಯಿಂದ ಆಚರಿಸುತ್ತೇವೆ.

Advertisement

ಆದರೆ ಈ ವರ್ಷ ಅಂತಹ ಸಂಭ್ರಮ ಸಡಗರವಿಲ್ಲ. ಕಾರಣ ಕೊರೊನಾ ವೈರಸ್‌ನ ಹಾವಳಿ. ಕೊರೊನಾ ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಇನ್ನೂ ನಿಯಂತ್ರಣಕ್ಕೆ ಸಿಗದ ಕಾರಣ ಶಾಲಾ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ.

ಹೀಗಾಗಿ ಈ ವರ್ಷ ಶಾಲೆಗಳಲ್ಲಿ “ವಂದೇ ಮಾತರಂ’ ಕೇಳಲಾಗುವುದಿಲ್ಲ ಎಂಬುದು ಬೇಸರದ ಸಂಗತಿ. ಸ್ವಾತಂತ್ರ್ಯೋತ್ಸವದ ಸಮಯದಲ್ಲೂ ಸ್ವತಂತ್ರವಾಗಿರಲು ಯಾಕೋ ಈ ಕೊರೊನಾ ಬಿಡುವಂತೆ ಕಾಣುತ್ತಿಲ್ಲ.

ಈ ದಿನ ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವಕ್ಕೆ ಒಂದು ವಾರವಿದೆ ಎನ್ನುವಾಗ ನಮ್ಮ ತಯಾರಿ ಆರಂಭವಾಗುತ್ತದೆ. ಹೊಸ ಶೂ, ಸಮವಸ್ತ್ರ, ಕೈಗೊಂದು ಬಾವುಟ…  ಹೀಗೆ ಹೊಸತನ್ನು ಕೊಳ್ಳುವ ಪಟ್ಟಿ ಸಿದ್ಧವಾಗುತ್ತಿತ್ತು. ಪೇಟೆಗೆ ನಮ್ಮನ್ನು ಕರೆದುಕೊಂಡು ಹೋದರಂತೂ ಮುಗೀತು. ಸಿದ್ಧಪಡಿಸಿದ ಪಟ್ಟಿಗೆ ಇನ್ನೂ ಕೆಲವು ವಸ್ತುಗಳು ಸೇರ್ಪಡೆಯಾಗುತ್ತಿದ್ದವು.

Advertisement

ಸ್ವಾತಂತ್ರ್ಯೋತ್ಸವದ ದಿನ ಬೇಗನೆ ಎದ್ದು ಶಾಲೆಗೆ ತಯಾರಾಗಿ ಹೋಗೋದೇ ಒಂದು ಖುಷಿ. ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿ ಶಾಲಾ ಆವರಣವನ್ನು ಸ್ವತ್ಛಗೊಳಿಸುವ ಕೆಲಸ ನಮಗಿರುತ್ತಿತ್ತು. ಎಲ್ಲ ಕೆಲಸ ಮುಗಿದ ಬಳಿಕ ಸರತಿ ಸಾಲಿನಲ್ಲಿ ನಿಂತು ಅತಿಥಿಗಳಿಗೆ ಗೌರವ ಸಲ್ಲಿಸಿ, ಅವರಿಂದ ಧ್ವಜಾರೋಹಣ ಮಾಡಿಸಿ ಧ್ವಜಗೀತೆ, ವಂದೇ ಮಾತರಂ, ರಾಷ್ಟ್ರೀಯ ಗೀತೆಗಳನ್ನು ಹಾಡುತ್ತಿದ್ದೆವು. ಅನಂತರ ನನ್ನ ಇಷ್ಟದ ಘೋಷಣೆಗಳನ್ನು ಕೂಗುತ್ತ ಸಾಗುವ ಮೆರವಣಿಗೆಗೆ ನಾವು ಸಜ್ಜಾಗುತ್ತಿದ್ದೆವು. ಕೈಯಲ್ಲಿ ಧ್ವಜವನ್ನು ಹಿಡಿದು ಠೀವಿಯಿಂದ ನಡೆದುಕೊಂಡು ಹೋಗುವುದೇ ಒಂದು ಸಂತಸ. ಮೆರವಣಿಗೆ ಮುಗಿದ ಬಳಿಕ ನಮಗೆ ನೀಡುತ್ತಿದ್ದ ಚಾಕಲೇಟು, ಸಿಹಿಯನ್ನು ಮನೆಯವರೆಗೂ ತಿನ್ನುತ್ತಾ ಹೋಗುತ್ತಿದ್ದೆವು.

ಆ ದಿನದಂದು ನಮ್ಮಲ್ಲಿ ದೇಶಪ್ರೇಮ ಹೆಚ್ಚಾಗುತ್ತಿದ್ದುದ್ದೇನೋ ನಿಜ. ಆದರೆ ಆ ದಿನ ನಮ್ಮ ಕೈಯಲ್ಲಿ ಹಾರಾಡುತ್ತಿದ್ದ ಪ್ಲಾಸ್ಟಿಕ್‌ನ ಧ್ವಜ ಮುಂದಿನ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಅಥವಾ ಶಾಲಾ ಆವರಣದಲ್ಲಿ ಬಿದ್ದಿರುತ್ತಿತ್ತು. ಆಗ ನಮಗೇನೂ ತಿಳಿಯುತ್ತಿರಲಿಲ್ಲ ಮತ್ತು ಹಿರಿಯರು ಈ ಬಗ್ಗೆ ನಮಗೆ ಎಚ್ಚರಿಸಿಯೂ ಇರಲಿಲ್ಲ. ಆದರೆ ನಾವು ದೊಡ್ಡವರಾಗುತ್ತಲೇ ಶಾಲಾ ದಿನಗಳಲ್ಲಿ ನಾವು ಮಾಡುತ್ತಿದ್ದ ಈ ತಪ್ಪಿನ ಅರಿವಾಯಿತು.

ದೇಶಪ್ರೇಮವು ನಾವು ಮಾಡುವ ಕೆಲಸದಲ್ಲಿ ಹಾಗೂ ದೇಶದ ಕಾನೂನನ್ನು ಪಾಲಿಸುವುದರಲ್ಲಿ ಇರಬೇಕೇ ಹೊರತು ಸ್ವಾತಂತ್ರ್ಯೋತ್ಸವದ ಒಂದು ದಿನ ಮಾತ್ರ ಅಲ್ಲ. ದೇಶದ ಸ್ವತ್ಛತೆಯನ್ನು ಕಾಪಾಡುವುದು, ಸಾರ್ವಜನಿಕ ಆಸ್ತಿ ರಕ್ಷಿಸುವುದು ಕೂಡ ದೇಶಪ್ರೇಮವೇ ಆಗಿದೆ.

ಜೈ ಹಿಂದ್‌ ಜೈ ಕರ್ನಾಟಕ…

ವೀಕ್ಷಿತಾ, ಬೆಸೆಂಟ್‌ ಮಹಿಳಾ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next