Advertisement

ಶತಮಾನೋತ್ಸವ‌ ಸಂಭ್ರಮದ ಹೊತ್ತಿಗೆ ಇನ್ನಷ್ಟು ಬೆಳಗಲಿ ಭಾರತ

12:09 AM Aug 15, 2022 | Team Udayavani |

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಹೊತ್ತಿನಲ್ಲಿ ಇಡೀ ದೇಶವೇ ಅಮೃತಮಹೋತ್ಸವ ಆಚರಣೆ ಮಾಡುತ್ತಿದೆ. ಈ 75 ವರ್ಷಗಳ ಕಾಲ ಭಾರತ ಸಾಧಿಸಿದ್ದು ಬಹಳಷ್ಟು. ಆದರೆ, ಇನ್ನು ಮುಂದೆ ಸಾಧಿಸಬೇಕಾಗಿರುವುದು ಬೃಹದಾಕಾರದಲ್ಲೇ ಇದೆ. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಮೇಲೆ, ನಾವು ಇಟ್ಟ ಒಂದೊಂದೇ ಹೆಜ್ಜೆಗಳು ಇಂದು ದೊಡ್ಡದಾಗಿ ಬೆಳೆದು ನಾವೂ ಜಗತ್ತಿನ ಮುಂದೆ ಗರ್ವದಿಂದ ನಿಲ್ಲುವಂಥ ದಿನಗಳು ಸೃಷ್ಟಿಯಾಗಿವೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.

Advertisement

ಆದರೂ, ಈ 75 ವರ್ಷಗಳನ್ನು ಒಮ್ಮೆ ತಿರುಗಿ ನೋಡಿದರೆ, ನಾವಿನ್ನೂ ಧರ್ಮ, ಜಾತಿ, ಮತದ ಅಂಕುಶದಿಂದ ದೂರ ಹೋಗಿಲ್ಲ ಎಂಬುದು ವಿಷಾದಕರ ಸಂಗತಿ. ಇಂದಿಗೂ ಚುನಾವಣೆಯ ಹೊತ್ತಲ್ಲಿ ಜಾತಿ, ಧರ್ಮದ ಹೆಸರಲ್ಲಿ ಮತ ಬೀಳುತ್ತಿವೆ ಎಂಬುದು ಒಪ್ಪಲು ಸ್ವಲ್ಪ ಕಷ್ಟಕರವಾಗುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಎಲ್ಲ ಅಡೆತಡೆಗಳನ್ನು ಮೀರಿ ಆಲೋಚಿಸುವ ದಿನಗಳೂ ಬರಬೇಕಿದೆ. ದೇಶದ ಜನತೆ ಪ್ರಜ್ಞಾವಂತರಾಗಿ, ಜಾತಿ, ಧರ್ಮ ಮೀರಿ ಮತ ಹಾಕುವ ಪ್ರಜ್ಞಾವಂತರಾಗಬೇಕಾಗಿದೆ.

ಪ್ರಸಕ್ತ ಸನ್ನಿವೇಶದಲ್ಲಿ ನೋಡುವುದಾದರೆ ಭಾರತ ಮುಂದು ವರಿದಿರುವುದಂತೂ ಸತ್ಯ. ಅದು ಎಲ್ಲ ರಂಗಗಳಲ್ಲಿಯೂ ಕಾಣ ಬಹುದು. 75 ಏಕೆ, 50 ವರ್ಷಗಳ ಹಿಂದೆ ಇದ್ದ ರೀತಿಯಲ್ಲಿ ಭಾರತ ಹೀಗಿಲ್ಲ. ಅದನ್ನು ನಾವು ಕಳೆದ ಕೋವಿಡ್‌ ಸಾಂಕ್ರಾಮಿಕದ ವೇಳೆ ಇಡೀ ಜಗತ್ತಿಗೇ ತೋರಿದ್ದೇವೆ. ಬಾಹ್ಯಾಕಾಶ, ವಿಜ್ಞಾನ, ಶೈಕ್ಷಣಿಕ, ಸಾಮಾಜಿಕ, ತಾಂತ್ರಿಕ, ಆರ್ಥಿಕ, ಕ್ರೀಡಾ ರಂಗ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಭಾರತೀಯರು ಮುಂದುವರಿದಿದ್ದಾರೆ.

ಇತ್ತೀಚೆಗಷ್ಟೇ ಮುಗಿದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯರು ಅಸಾಧಾರಣ ಶಕ್ತಿ ತೋರಿ ವಾಪಸ್‌ ಬಂದಿದ್ದಾರೆ. ಇದು ನಮ್ಮ ಕ್ರೀಡಾಶಕ್ತಿಯನ್ನು ಬಹಿ ರಂಗಪಡಿಸಿದೆ. ಹಾಗೆಯೇ, ತಾಂತ್ರಿಕ ಮಟ್ಟದಲ್ಲಂತೂ ಅಭಿವೃದ್ಧಿ ಸಾಧಿಸಿದ ದೇಶಗಳನ್ನು ಮೀರಿ ನಾವು ಮುಂದುವರಿದಿದ್ದೇವೆ. ಜಗತ್ತಿನ ಶ್ರೇಷ್ಠ ಕಂಪೆನಿಗಳ ಸಿಇಒಗಳಾಗಿ ಭಾರತೀಯರೇ ಅಧಿಕಾರ ನಡೆಸುತ್ತಿದ್ದಾರೆ. ಕರ್ನಾಟಕ ರಾಜಧಾನಿ ಬೆಂಗಳೂರು, ಅಮೆರಿಕದ ಸಿಲಿಕಾನ್‌ ಸಿಟಿಗೇ ಸೆಡ್ಡು ನೀಡುವಷ್ಟರ ಮಟ್ಟಿಗೆ ಬೆಳೆದಿದೆ.

ಹಾಗೆಯೇ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ನಾವು ಅಸಾಧಾರಣ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಚಂದ್ರನಲ್ಲಿ ನೀರಿನ ಅಂಶವಿದೆ ಎಂದು ಇಡೀ ಜಗತ್ತಿಗೇ ಹೇಳಿದವರೇ ನಾವು. ಅಲ್ಲದೆ, ಅತ್ಯಂತ ಕಡಿಮೆ ಹಣದಲ್ಲಿ ಮಂಗಳನ ಅಂಗಳದ ಅಧ್ಯಯನವನ್ನೂ ನಡೆಸಿದ್ದೇವೆ. ಈಗಷ್ಟೇ ಮಾನವ ಸಹಿತ ಗಗನಯಾನಕ್ಕೆ ಸಿದ್ಧತೆಯನ್ನೂ ಮಾಡುತ್ತಿದ್ದೇವೆ. ಹಾಗೆಯೇ, ಆರೋಗ್ಯ ಕ್ಷೇತ್ರದಲ್ಲಿಯೂ ನಮ್ಮ ಸಾಧನೆ ಮೆಚ್ಚತಕ್ಕದ್ದೇ ಆಗಿದೆ. ಕೊರೊನಾ ಕಾಲದಲ್ಲಿ ಲಸಿಕೆಯನ್ನು ಶೋಧಿಸಿ, ಇಡೀ ಜಗತ್ತಿಗೇ ಹಂಚಿದ್ದೇವೆ.

Advertisement

ಈ ಎಲ್ಲ ಸಾಧನೆಗಳ ಜತೆಗೆ ನಮ್ಮ ಮುಂದೆ ಇರುವ ಹಾದಿಯೂ ಕಠಿನವಾಗಿಯೇ ಇದೆ. ದೊಡ್ಡ ದೊಡ್ಡ ದೇಶಗಳ ಜತೆ ಸ್ಪರ್ಧಿಸಬೇಕಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರಿಯ ಬೇಕಾಗಿದೆ. ಮುಂದಿನ 25 ವರ್ಷಗಳು ನಮ್ಮ ಪಾಲಿಗೆ ಮಹತ್ವದವು ಎಂದು ಹೇಳುವುದಕ್ಕೆ ಯಾವುದೇ ಅಡ್ಡಿ ಇಲ್ಲ.

ಇದರ ನಡುವೆ ಸೋಮವಾರದ ಸ್ವಾತಂತ್ರ್ಯ ಸಂಭ್ರಮವನ್ನು ಅದ್ಧೂರಿಯಿಂದ ಆಚರಣೆ ಮಾಡೋಣ. ಈ ಸ್ವಾತಂತ್ರ್ಯ ಸಂಭ್ರಮ ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗಳಿಗೆ ಸೇರಿದ್ದಲ್ಲ. ಇದು ಎಲ್ಲರ ಹಬ್ಬ. ಇದು ಮನೆ ಮನೆಯ ಹಬ್ಬವಾಗಿ ಆಚರಣೆಯಾಗಲಿ. ಈ ಮೂಲಕ ಶತಮಾನೋತ್ಸವದ ಸಂಭ್ರಮಕ್ಕೂ ಮುನ್ನುಡಿಯಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next