ಕಕ್ಕೇರಾ: ಸ್ವಾತಂತ್ರ್ಯಾದಿನ ಆಚರಿಸಬೇಕು ಎಂದರೆ ಇತ್ತ ಪ್ರವಾಹದ ಆತಂಕ. ಅತ್ತ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಧ್ವಜಾರೋಹಣ ನೆರವೇರಿಸಬೇಕು. ಹೀಗಾಗಿ ಕೃಷ್ಣಾ ಪ್ರವಾಹ ಆವರಿಸಿದ ನೀಲಕಂಠರಾಯನಗಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸನಗೌಡ ಗಡ್ಡಿಯಲ್ಲಿಯೇ ಮೂರು ದಿನ ಉಳಿದರು. ಅಲ್ಲದೇ ಬುಧವಾರ 72ನೇ ಸ್ವಾತಂತ್ರ್ಯಾ ದಿನ ಆಚರಿಸಿ ಧ್ವಜಾರೋಹಣ ನೆರವೇರಿಸಿದರು. ಬಸವಸಾಗರ ಜಲಾಶಯದಿಂದ ಸದ್ಯ ಹರಿಸಿದ್ದು, ನೀಲಕಂಠರಾಯನಗಡ್ಡಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಶಿಕ್ಷಕ ಬಸವರಾಜ ಮೊದಲೇ ಗ್ರಾಮಕ್ಕೆ ಹೋಗಿ ಅಲ್ಲಿಯೇ ವಾಸ್ತವ್ಯ ಮಾಡಿ ಬುಧವಾರ ಮಕ್ಕಳೊಂದಿಗೆ ಸ್ವಾತಂತ್ರ್ಯಾ ದಿನ ಆಚರಿಸಿದರು.
ಪ್ರತಿ ವರ್ಷ ಪ್ರವಾಹ ಸಮಸ್ಯೆಯಿಂದಾಗಿ ಸ್ವಾತಂತ್ರ್ಯಾ ದಿನ ಆಚರಿಸಲು ಸಾಹಸ ಮಾಡಿದಂತಾಗುತ್ತಿದೆ. ಅಲ್ಪ ಪ್ರಮಾಣ ನೀರು ಇದ್ದರೂ ಕಕ್ಕೇರಾದಿಂದ 12 ಕಿಮೀ ಬಂದು ಕೃಷ್ಣಾ ನದಿ ದಾಟಿಕೊಂಡೇ ದೈನಂದಿನ ಕರ್ತವ್ಯಗೆ ಹಾಜರಾಗಬೇಕು.
ಕಳೆದ ಎರಡು ವಾರದ ಹಿಂದೆಯೂ ಗಡ್ಡಿಯಲ್ಲಿ ಇದ್ದು ಬೋಧನೆಯಲ್ಲಿ ನಿರತನಾಗಿದ್ದೆ. ಪ್ರವಾಹ ಇಳಿಮುಖವಾದಾಗ ಅಲ್ಲಿಂದ ಕಕ್ಕೇರಾಗೆ ಬಂದು ದಿನ ನಿತ್ಯ ನೀಲಕಂಠರಾಯನಗಡ್ಡಿ ಶಾಲೆಗೆ ಹಾಜರಾಗಿ ಬರುತ್ತಿದ್ದೆ. ಆದರೆ ಮಹಾರಾಷ್ಟ್ರದಲ್ಲಿ ವ್ಯಾಪಾಕ ಮಳೆ ಆಗುತ್ತಿರುವುದರಿಂದಾಗಿ ಪ್ರವಾಹ ಬರುವ ಸಾಧ್ಯತೆ ಅರಿತು ಗಡ್ಡಿಯಲ್ಲಿ ಉಳಿದುಕೊಂಡಿದ್ದೇನೆ ಎಂದು ಶಿಕ್ಷಕ ಬಸನಗೌಡ
ತಿಳಿಸಿದ್ದಾರೆ.