Advertisement

ತಾಪಂ ಎದುರು ಗ್ರಾಪಂ ಸದಸ್ಯರ ಅನಿರ್ದಿಷ್ಟ ಧರಣಿ

07:03 PM Sep 08, 2022 | Team Udayavani |

ಆಳಂದ: ಪಟ್ಟಣದ ತಾಲೂಕು ಪಂಚಾಯತ ಕಚೇರಿ ಎದುರು ತಡಕಲ್‌, ರುದ್ರವಾಡಿ, ತಡೋಳಾ ಗ್ರಾಮ ಪಂಚಾಯಿತಿಯ ಆರು ಸದಸ್ಯರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಜಂಟಿಯಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

Advertisement

ತಡಕಲ್‌ ಗ್ರಾಪಂನಲ್ಲಿ ಮನೆ ಹಂಚಿಕೆಗೆ ಪುನರ್‌ ಗ್ರಾಮ ಸಭೆ ಕರೆದು ಹಂಚಿಕೆಯಾಗಬೇಕು. ಹಿಂದೆ ಮನೆ ಹಂಚಿಕೆಯಲ್ಲಿ ಕಾನೂನು ಉಲ್ಲಂಘಿ ಸಿದ ಅಧಿಕಾರಿಯನ್ನು ವಜಾಗೊಳಿಸಬೇಕು. ಉದ್ಯೋಗ ಖಾತ್ರಿಯಡಿ ಮೃತರ ಹೆಸರಿನಲ್ಲಿ ಹಣ ದುರ್ಬಳಕೆ ವಿರುದ್ಧ ಹಾಗೂ 2022-23ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಮತ್ತು ಅಮೃತ ಗ್ರಾಮ ಕ್ರಿಯಾ ಯೋಜನೆ ಗ್ರಾಮಸಭೆ ವಾರ್ಡ್‌ ಸಭೆ ಮಾಡದೇ, ನಡಾವಳಿ ಪುಸ್ತಕ ಬರೆಯದೇ ಕೈಗೊಂಡು ನಿಯಮ ಉಲ್ಲಂಘಿಸಿದ್ದಾರೆ. ರದ್ದುಗೊಳಿಸಿ ಹೊಸ ಕ್ರಿಯಾ ಯೋಜನೆ ರೂಪಿಸಬೇಕು. ಗ್ರಾಪಂ ಸಂಗ್ರಹಿಸಿದ ತೆರಿಗೆ ಹಣದ ಖರ್ಚು ವೆಚ್ಚಗಳ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಸ್ಥಾಯಿ ಸಮಿತಿ ರಚನೆ ಮಾಡದೇ ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷರ ಸರ್ವಾಧಿಕಾರಿ ಆಡಳಿತ ನಡೆಸಿದ ಇವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಆರು ತಿಂಗಳಿಂದ ಸಾಮಾನ್ಯ ಸಭೆ ನಡೆಸದೇ ಖರ್ಚು ವೆಚ್ಚ ಮಾಡುತ್ತಿದ್ದಾರೆ. ಕನಿಷ್ಟ ಎರಡು ತಿಂಗಳಿಗೊಮ್ಮೆಯಾದರೂ ಪಂಚಾಯತ್‌ ರಾಜ್ಯ ಅಧಿನಿಯಮದಂತೆ ಸಾಮಾನ್ಯ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಈ ಕುರಿತು ಬೇಡಿಕೆ ಮುಂದಿಟ್ಟುಕೊಂಡು ತಾಪಂ ಅಧಿಕಾರಿಗಳಿಗೆ ಮೌಖೀಕ ಮತ್ತು ಲಿಖೀತವಾಗಿ ದೂರು ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡುವತನಕ ಧರಣಿ ವಾಪಸ್ಸು ಪಡೆಯುವುದಿಲ್ಲ ಎಂದು ಧರಣಿ ನಿರತರು ಸ್ಪಷ್ಟಪಡಿಸಸಿದರು.

Advertisement

ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಕಿಸಾನಸಭಾ ರಾಜ್ಯ ಉಪಾಧ್ಯಕ್ಷ ಮೌಲಾ ಮುಲ್ಲಾ, ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಂದ್ರ ಥಂಬೆ, ಡಿಎಸ್‌ಎಸ್‌ ಮುಖಂಡ ಭೀಮಾಶಂಖರ ತಳಕೇರಿ ಮತ್ತಿತರರು ಮಾತನಾಡಿದರು.

ತಡೋಳಾ ಗ್ರಾಪಂನಲ್ಲಿ 2016ರಿಂದ 2020ರ ವರೆಗಿನ ಒಂದು ಕೋಟಿ ರೂ. ಅವ್ಯವಹಾರ ಕುರಿತು ತನಿಖೆ ಮಾಡಲಾಗಿದೆ. ಆದರೆ ತಪ್ಪಿತಸ್ಥ ಪಿಡಿಒ ವಿರುದ್ಧ ಕಾನೂನು ಕ್ರಮ ಜರುಗಿಸದೇ ಬಡ್ತಿ ನೀಡಿದ್ದಾರೆ. ಆ ಹಣವನ್ನು ಮರಳಿ ಗ್ರಾಪಂಗೆ ಕಟ್ಟಬೇಕು ಎಂದು ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ ನೇತೃತ್ವದಲ್ಲಿ ಕೆಲವರು ಧರಣಿಯಲ್ಲಿ ಭಾಗವಹಿಸಿದ್ದಾರೆ. ರುದ್ರವಾಡಿ ಗ್ರಾಪಂನಲ್ಲಿ ಅವ್ಯವಹಾರ ತನಿಖೆ ಹಾಗೂ ಕಚೇರಿಗೆ ಬಾರದೆ ಕಾರ್ಯನಿರ್ವಹಿಸುವ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಧರಣಿ ನಡೆಸಿದ್ದಾರೆ.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶರಣಬಸ್ಸಪ್ಪ ವಾಗೆ, ಸೈಬಣ್ಣ ಗುಗರೆ, ವಿಶ್ವನಾಥ ಪವಾಡಶೆಟ್ಟಿ, ಶರಣಯ್ಯ ಸ್ವಾಮಿ, ಬಸವರಾಜ ಬಿರಾದಾರ, ಸಿದ್ಧಪ್ಪ ರುದ್ರವಾಡಿ, ಶರಣಮ್ಮ ಜಮಾದಾರ, ಆನಂದ್‌ರಾಯ್‌ ಅಳ್ಳೆ, ಉಸ್ಮಾನ್‌ಸಾಬ್‌ ಕಖಾಂದಾರ, ಪಾರ್ವತಿಬಾಯಿ ಥಂಬೆ, ಮಹಾನಂದಾ ಆರ್‌. ತುಕಾಣೆ, ಅಣವೀರಪ್ಪ ಬೆಳ್ಳೆ, ಶಿವಾನಂದ ಮಳಗಿ, ನಾಗಣ್ಣ ತಡಕಲ್‌, ಮನೋಹರ ಶಿರೋಳೆ, ಶ್ರೀಶೈಲ ಘುಗರೆ, ಬಿಸ್ಮಿಲ್ಲಾ ಲದಾಫ್‌ ಭಾಗವಹಿಸಿದ್ದ ಧರಣಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಗುರುವಾರಕ್ಕೆ ಮುಂದುವರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next