ಪಿರಿಯಾಪಟ್ಟಣ: ಪೋಡಿ ಮುಕ್ತ ಗ್ರಾಮ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ತಾಲೂಕಿನ ಮುಮ್ಮಡಿ ಕಾವಲು ಗ್ರಾಮಸ್ಥರು ಪಟ್ಟಣದ ತಾಲೂಕು ಆಡಳಿತ ಭವನದ ಮುಂಭಾಗ ಸೋಮವಾರ ಅನಿರ್ದಿಷ್ಟವಧಿ ಧರಣಿ ಕೈಗೊಂಡಿದ್ದಾರೆ. ಪ್ರತಿಭಟನೆಯನ್ನುದ್ದೇಶಿಸ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ದೊಡ್ಡಯ್ಯ, ಮುಮ್ಮಡಿ ಕಾವಲು ಗ್ರಾಮದಲ್ಲಿ 1970-7 ರಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಪೋಡಿ ಮುಕ್ತ ಮಾಡುವಂತೆ ಸರ್ಕಾರ ಆದೇಶಿಸಿದೆ.
ಜಿಲ್ಲಾಧಿಕಾರಿಗಳು ಸಹ ಒಪ್ಪಿಗೆ ನೀಡಿದ್ದಾರೆ. ಆದರೆ, ಸರ್ವೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸಾಗುವಳಿ ಚೀಟಿ ದೊರೆತಿಲ್ಲ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯದಲ್ಲಿಯೂ ಗ್ರಾಮವನ್ನು ಪೋಡಿಮುಕ್ತ ಮಾಡಿಕೊಡುವಂತೆ ಸೂಚಿಸಿದ್ದರೂ ಅಧಿಕಾರಿಗಳು ಅಸಡ್ಡೆ ತೋರುತ್ತ ನ್ಯಾಯಾಲಯದ ಆದೇಶವನ್ನೂ ಉಲ್ಲಂ ಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಹಿಷ್ಕಾರ: ಕಳೆದ ಲೋಕಸಭಾ ಚುನಾವಣೆ ವೇಳೆ, ಮುಮ್ಮಡಿ ಕಾವಲು ಗ್ರಾಮವನ್ನು ಪೋಡಿಮುಕ್ತ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಮಧ್ಯಪ್ರವೇಶಿಸಿ, ಗ್ರಾಮದ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು. ಚುನಾವಣೆ ಬಹಿಷ್ಕಾರ ಕೈಬಿಡಿ ಎಂದು ಮನವಿ ಮಾಡಿದ್ದರು. ಇದಕ್ಕೆ ಗ್ರಾಮಸ್ಥರು ಸ್ಪಂದಿಸಿ, ಮತದಾನ ಮಾಡಿದ್ದರು. ಆದರೆ, ಚುನಾವಣೆ ಕಳೆದು 7 ತಿಂಗಳು ಕಳೆದರೂ ಗ್ರಾಮಕ್ಕೆ ಅಗತ್ಯ ರಸ್ತೆ, ಚರಂಡಿ, ಪೋಡಿ ಸೇರಿದಂತೆ ಇನ್ನಿತರ ಯಾವುದೇ ಮೂಲಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ಸ್ಪಂದಿಸದ ಆಡಳಿತ: ತಾಲೂಕು ಆಡಳಿತದ ಬೇಜವಾಬ್ದಾರಿ ಧೋರಣೆ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದಾಗ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಿದ್ದರೂ ಅವರ ಮಾತಿಗೆ ಕಿಂಚಿತ್ತು ಬೆಲೆ ನೀಡಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ತನಕ ಧರಣಿಯನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಮು, ಕಾಳಯ್ಯ, ಮಲ್ಲೇಶ್, ತಿಮ್ಮಯ್ಯ, ನಾರಾಯಣ, ಉತ್ತೇನಹಳ್ಳಿ ವೆಂಕಟೇಶ್, ಮಂಜು, ಜಯಣ್ಣ, ಶಿವಯ್ಯ, ಕುಮಾರ, ಗಿರೀಜಾ, ರೇಣುಕಾ, ಆನಂದ, ಕರಿಯಯ್ಯ, ಮುದಿರಯ್ಯ, ಕೃಷ್ಣಮೂರ್ತಿ, ನವೀನ, ದೇವರಾಜ್ ಮತ್ತಿತರರಿದ್ದರು.