ಅಹ್ಮದಾಬಾದ್: ಭಾರತದ ಪುರುಷರ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋತು ಮುಖಭಂಗ ಅನುಭವಿಸಿರುವಂತೆಯೇ, ಇತ್ತ ವನಿತೆಯರು ನ್ಯೂಜಿಲ್ಯಾಂಡ್ ವಿರುದ್ಧವೇ ಏಕದಿನ ಸರಣಿ ವಶಪಡಿಸಿ ಕೊಳ್ಳಲು ಸಿದ್ಧತೆ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾರೆ.
ರವಿವಾರ ಅಹ್ಮದಾಬಾದ್‌ನಲ್ಲಿ ದ್ವಿತೀಯ ಪಂದ್ಯ ನಡೆಯಲಿದ್ದು, ಮೊದಲ ಮುಖಾಮುಖಿಯನ್ನು 59 ರನ್ನುಗಳಿಂದ ಗೆದ್ದ ಭಾರತ ಸಹಜವಾಗಿಯೇ ನಿರೀಕ್ಷೆ ಯನ್ನು ಹೆಚ್ಚಿಸಿಕೊಂಡಿದೆ.
ಗಾಯಾಳಾದ ಕಾರಣ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ರವಿವಾರ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದ ರಿಂದ ಸ್ಮತಿ ಮಂಧನಾ ಒತ್ತಡ ಬಿಟ್ಟು ಆಡಬಹುದಾಗಿದೆ. ಮೊದಲ ಪಂದ್ಯದಲ್ಲಿ ಮಂಧನಾ ಕೇವಲ 5 ರನ್ ಮಾಡಿ ಔಟಾಗಿದ್ದರು. ಅವರು ದಕ್ಷಿಣ ಆಫ್ರಿಕಾ ಎದುರು ತೋರ್ಪಡಿಸಿದಂಥ ಫಾರ್ಮ್ ಪುನರಾವರ್ತಿಸಬೇಕಿದೆ. ಜುಲೈಯಲ್ಲಿ ನಡೆದ ಈ ಏಕದಿನ ಸರಣಿಯಲ್ಲಿ ಮಂಧನಾ 2 ಶತಕ ಬಾರಿಸಿ ಮಿಂಚಿದ್ದರು.
ಆಲ್‌ರೌಂಡರ್ ಕೆರ್ ಔಟ್:
ಸರಣಿಯನ್ನು ಸಮಬಲಗೊಳಿಸುವ ಯೋಜನೆಯಲ್ಲಿರುವ ನ್ಯೂಜಿ ಲ್ಯಾಂಡಿಗೆ ಬಲವಾದ ಆಘಾತವೊಂದು ಎದುರಾಗಿದೆ. ಅವರ ಪ್ರಧಾನ ಆಟ ಗಾರ್ತಿ, ಆಲ್‌ರೌಂಡರ್ ಅಮೇಲಿಯಾ ಕೆರ್ ಗಾಯಾಳಾಗಿ ಸರಣಿಯಿಂದ ಬೇರ್ಪಟ್ಟಿದ್ದಾರೆ. ಅವರು ರವಿವಾರ ತವರಿಗೆ ವಾಪಸಾಗಲಿದ್ದಾರೆ. ಭಾರತ ಅಮೇಲಿಯಾ ಗೈರಿನ ಲಾಭವನ್ನು ಎತ್ತಬೇಕಿದೆ.