Advertisement

ಹಸರಂಗ ಕಮಾಲ್‌: ಟಿ20 ಸರಣಿ ಗೆದ್ದ ಲಂಕಾ

11:11 PM Jul 29, 2021 | Team Udayavani |

ಕೊಲಂಬೊ: ಬರ್ತ್‌ಡೇ ಬಾಯ್‌ ವನಿಂದು ಹಸರಂಗ ಅವರ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ, ಆತಿಥೇಯ ಶ್ರೀಲಂಕಾ ಎದುರಿನ ನಿರ್ಣಾಯಕ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲನುಭವಿಸಿದೆ. ಲಂಕಾ ಈ ಗೆಲುವಿನೊಂದಿಗೆ ಏಕದಿನ ಸರಣಿ ಸೋಲಿನ ಸೇಡನ್ನುತೀರಿಸಿಕೊಂಡಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 81 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಲಂಕಾ 14.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 82 ರನ್‌ ಪೇರಿಸಿ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

ಭಾರತಕ್ಕೆ ಆರಂಭಿಕ ಆಘಾತ:

ಭಾರತದ ಎಲ್ಲ ಲೆಕ್ಕಾಚಾರವು ಮೊದಲ ಓವರಿನಲ್ಲೇ ತಲೆ ಕೆಳಗಾಗತೊಡಗಿತು. ನಾಯಕ ಶಿಖರ್‌ ಧವನ್‌ ತಾನೆದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ಭಾರತದ ಕುಸಿತಕ್ಕೆ ಚಾಲನೆ ಕೊಟ್ಟರು. ಇದು ಎಷ್ಟು ತೀವ್ರವಾಗಿತ್ತೆಂದರೆ, ಪವರ್‌ ಪ್ಲೇ ಅವಧಿಯಲ್ಲೇ 4 ಪ್ರಮುಖ ವಿಕೆಟ್‌ ಉರುಳಿ ಹೋಯಿತು. ದೇವದತ್ತ ಪಡಿಕ್ಕಲ್‌ (9), ಸಂಜು ಸ್ಯಾಮ್ಸನ್‌ (0), ಋತುರಾಜ್‌ ಗಾಯಕ್ವಾಡ್‌ (14) ಸಾಲು ಸಾಲಾಗಿ ಪೆವಿಲಿಯನ್‌ ಹಾದಿ ಹಿಡಿದರು. ಧವನ್‌ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ ಭಾರತದ ಮೊದಲ ನಾಯಕನೆನಿಸಿದರು.

ಲೆಗ್‌ಸ್ಪಿನ್ನರ್‌ ವನಿಂದು ಹಸರಂಗ ಒಂದೇ ಓವರ್‌ನಲ್ಲಿ ಸ್ಯಾಮ್ಸನ್‌, ಗಾಯಕ್ವಾಡ್‌ ಅವರನ್ನು ಉರುಳಿಸಿ ಲಂಕೆಗೆ ಭರ್ಜರಿ ಮೇಲುಗೈ ಒದಗಿಸಿದರು. ಭಾರತದ ಪವರ್‌ ಪ್ಲೇ ಸ್ಕೋರ್‌ 4ಕ್ಕೆ 29 ರನ್‌.

Advertisement

ನಿತೀಶ್‌ ರಾಣಾ (6) ಕೂಡ ಲಂಕಾ ದಾಳಿಯನ್ನು ನಿಭಾಯಿಸಿ ನಿಲ್ಲಲು ವಿಫ‌ಲರಾದರು. 9 ಓವರ್‌ ಮುಗಿಯುವಷ್ಟರಲ್ಲಿ ಭಾರತದ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳೆಲ್ಲ ಆಟ ಮುಗಿಸಿ ವಾಪಸಾಗಿದ್ದರು. ಅರ್ಧ ಹಾದಿ ಕ್ರಮಿಸುವಾಗ ಭಾರತ 39 ರನ್ನಿಗೆ 5 ವಿಕೆಟ್‌ ಉರುಳಿ ಸಿಕೊಂಡು ಪರದಾಡುತ್ತಿತ್ತು. ಬೌಲರ್‌ಗಳಾದ ಭುವನೇಶ್ವರ್‌  ಮತ್ತು ಕುಲದೀಪ್‌ ಆಗಲೇ ಕ್ರೀಸ್‌ ಇಳಿದಾಗಿತ್ತು.

15ನೇ ಓವರ್‌ ಅಂತ್ಯಕ್ಕೆ 6 ವಿಕೆಟಿಗೆ 55 ರನ್‌ ಗಳಿಸಿದ್ದ ಭಾರತ, ಸುಧಾರಿಸುವ ಯಾವ ಲಕ್ಷಣವನ್ನೂ ತೋರಲಿಲ್ಲ. ಈ ಅವಧಿಯಲ್ಲಿ ಭುವನೇಶ್ವರ್‌ ಕುಮಾರ್‌ ಅತೀ ಹೆಚ್ಚು 32 ಎಸೆತ ಎದುರಿಸಿಯೂ ಬೌಂಡರಿ ಬಾರಿಸದ ಭಾರತದ ದಾಖಲೆಯೊಂದನ್ನು ಬರೆದರು (32 ಎಸೆತ, 16 ರನ್‌). ಅಜೇಯ 23 ರನ್‌ ಮಾಡಿದ ಕುಲದೀಪ್‌ ಭಾರತ ಸರದಿಯ ಗರಿಷ್ಠ ಸ್ಕೋರರ್‌.  ಹಸರಂಗ 9 ರನ್ನಿತ್ತು 4 ವಿಕೆಟ್‌ ಉಡಾಯಿಸಿದರು.

ನೆಟ್‌ ಬೌಲರ್‌ ವಾರಿಯರ್‌ ಪದಾರ್ಪಣೆ :

ನಿರ್ಣಾಯಕ ಪಂದ್ಯಕ್ಕೆ ಭಾರತ ಒಂದು ಬದಲಾವಣೆ ಮಾಡಿಕೊಂಡಿತು. ಗಾಯಾಳು ನವದೀಪ್‌ ಸೈನಿ ಬದಲು ಸಂದೀಪ್‌ ವಾರಿಯರ್‌ ಅವರನ್ನು ಆಡಿಸಿತು. ಕೇರಳದ ಮಧ್ಯಮ ವೇಗಿಯಾಗಿರುವ ವಾರಿಯರ್‌ ಭಾರತದ ಮೂಲ ತಂಡದಲ್ಲಿರಲಿಲ್ಲ. ನೆಟ್‌ ಬೌಲರ್‌ ಆಗಿ ತಂಡದೊಂದಿಗೆ ತೆರಳಿದ್ದರು. ತಂಡದ ಕೋವಿಡ್‌ ಕೇಸ್‌, ಐಸೊಲೇಶನ್‌ ಮೊದಲಾದ ಕಾರಣಗಳಿಂದ ಪ್ರಮುಖ ಆಟಗಾರರು ಲಭ್ಯರಾಗದ ಕಾರಣ ವಾರಿಯರ್‌ಗೆ ಅದೃಷ್ಟ ಖುಲಾಯಿಸಿತು.

ಲಂಕಾ ತಂಡದಲ್ಲೂ ಒಂದು ಬದಲಾ ವಣೆ ಕಂಡುಬಂತು. ಉದಾನ ಬದಲು ಪಥುಮ್‌ ನಿಸ್ಸಂಕ ಅವಕಾಶ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next