Advertisement

IND vs NZ 1st Test; ಅಮೋಘ ಆಟವಾಡಿ 99 ಕ್ಕೆ ಔಟಾದ ರಿಷಭ್ ಪಂತ್!

05:39 PM Oct 19, 2024 | Team Udayavani |

ಬೆಂಗಳೂರು: ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಾಲ್ಕನೇ ದಿನದಾಟವಾದ ಶನಿವಾರ(ಅ19 )ಅಮೋಘ ಆಟವಾಡಿದ ರಿಷಭ್ ಪಂತ್ ಶತಕದ ಹೊಸ್ತಿಲಲ್ಲಿ ಎಡವಿ ಭಾರೀ ನಿರಾಸೆಗೆ ಒಳಗಾದರು.

Advertisement

ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟಾಗಿ ತೀವ್ರ ಸಂಕಷ್ಟ ಸ್ಥಿತಿಯಲ್ಲಿ ಆಡಲಿಳಿದ ಭಾರತ ನ್ಯೂಜಿಲ್ಯಾಂಡ್ ತಂಡವನ್ನು 402 ಕ್ಕೆ ನಿಯಂತ್ರಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ 35, ನಾಯಕ ರೋಹಿತ್ ಶರ್ಮ 52, ವಿರಾಟ್ ಕೊಹ್ಲಿ ಅವರ 70 ರನ್ ಕೊಡುಗೆಯ ಬಳಿಕ ತಂಡಕ್ಕೆ ಆಧಾರವಾದ ಸರ್ಫರಾಜ್ ಖಾನ್ 150 ರನ್ ಕೊಡುಗೆ ಸಲ್ಲಿಸಿ ಔಟಾದರು. 195 ಎಸೆತಗಳಿಂದ 150 ರನ್ ಕೊಡುಗೆ ತಂಡಕ್ಕೆ ದೊಡ್ಡ ಮಟ್ಟದ ಆಧಾರವಾಗಿ ಪರಿಣಮಿಸಿತು. ಸರ್ಫರಾಜ್ ಅವರಿಗೆ ಸಾಥ್ ನೀಡಿದ ರಿಷಭ್ ಪಂತ್ 99 ರನ್ ಗಳಿಸಿದ್ದ ವೇಳೆ ವಿಲಿಯಮ್ ಓ ರೂರ್ಕ್ ಎಸೆದ ಚೆಂಡು  ಬ್ಯಾಟ್ ಗೆ ತಗುಲಿ ಇನ್ ಸೈಡ್ ಎಡ್ಜ್ ಆಗಿ ವಿಕೆಟ್ ಗೆ ತಗುಲಿತು. ಈ ವೇಳೆ ಎಲ್ಲರೂ ಭಾರೀ ನಿರಾಶರಾದರು. ಅಮೋಘ ಆಟವಾಡಿದ ಪಂತ್ 105 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಅಮೋಘ ಸಿಕ್ಸರ್ ಸಿಡಿಸಿದರು.ಅದರಲ್ಲಿ ಒಂದು 107 ಮೀಟರ್ ಸಿಕ್ಸರ್ ಎಲ್ಲರ ಗಮನ ಸೆಳೆಯಿತು.

ಟೆಸ್ಟ್‌ನಲ್ಲಿ 90 ರನ್ ದಾಟಿದ ಬಳಿಕ ಅತಿ ಹೆಚ್ಚು ಔಟಾದ ಭಾರತದ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್(10ಬಾರಿ) ಮೊದಲಿಗರಾಗಿದ್ದಾರೆ. ರಾಹುಲ್ ದ್ರಾವಿಡ್ 9 ಬಾರಿ, ರಿಷಭ್ ಪಂತ್ 7 ಬಾರಿ, ಸುನಿಲ್ ಗವಾಸ್ಕರ್ 5 ಬಾರಿ, ಎಂಎಸ್ ಧೋನಿ 5 ಬಾರಿ,ವೀರೇಂದ್ರ ಸೆಹ್ವಾಗ್ 5 ಬಾರಿ ಔಟಾಗಿ ನಿರಾಶರಾಗಿದ್ದರು. ಟೆಸ್ಟ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಔಟಾದ ಕೀಪರ್‌ಗಳು ಪಂತ್ ಮತ್ತು ಧೋನಿ ಅವರಾಗಿದ್ದಾರೆ.

ಪಂತ್ ಅವರು ಒಮ್ಮೆ ರನ್ ಔಟ್ ಆಗುವ ಸಾಧ್ಯತೆ ಇತ್ತು, ಈ ವೇಳೆ ಸರ್ಫಾರಾಜ್ ಅವರು ಕೂಗಿ ಮರಳುವಂತೆ ಹೇಳಿ ಪಾರು ಮಾಡಿದ್ದರು.

Advertisement

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 462 ರನ್ ಗಳಿಗೆ ಆಲೌಟಾಯಿತು. ಕೆ.ಎಲ್. ರಾಹುಲ್ ಕೂಡ 12 ರನ್ ಗಳಿಸಲಷ್ಟೇ ಶಕ್ತರಾದರು. ಜಡೇಜ 5, ಅಶ್ವಿನ್ 15 ರನ್ ಗಳಿಸಿ ಔಟಾದರು. ನ್ಯೂಜಿಲ್ಯಾಂಡ್ ಗೆಲುವಿಗೆ 107 ರನ್‌ಗಳ ಸಣ್ಣ ಮೊತ್ತ ಅಗತ್ಯವಿದೆ. ಸದ್ಯ ಬೌಲರ್ ಗಳ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಪಂದ್ಯದ ಚಿತ್ರಣ ಬದಲಿಸಬೇಕಾದರೆ ಭಾರೀ ಸಾಹಸ ಮಾಡಬೇಕಾಗಿದೆ. ದಟ್ಟ ಮೋಡಗಳು ಕವಿದು ಮಳೆ ಸುರಿದ ಕಾರಣ ದಿನದಾಟವನ್ನು ಬೇಗನೆ ಮುಗಿಸಬೇಕಾಯಿತು. ನಾಳೆ ನಿರ್ಣಾಯಕ ದಿನವಾಗಿದ್ದು ಮಳೆ ಪಂದ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next