Advertisement
ಬಾಂಗ್ಲಾ 19.5 ಓವರ್‌ಗಳಲ್ಲಿ 127ಕ್ಕೆ ಕುಸಿದರೆ, ಸ್ಫೋಟಕ ಜವಾಬು ನೀಡಿದ ಭಾರತ ಕೇವಲ 11.5 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್ ಮಾಡಿತು. ಇದು ಅತ್ಯಧಿಕ 49 ಎಸೆತ ಬಾಕಿ ಉಳಿದಿರುವಾಗಲೇ ಭಾರತ ಸಾಧಿಸಿದ ಟಿ20 ಗೆಲುವಾಗಿ ದಾಖಲಾಯಿತು.
Related Articles
ಸ್ಟ್ರೈಕ್ ಬೌಲರ್ ಅರ್ಷದೀಪ್ ಸಿಂಗ್, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಉಡಾಯಿಸಿ ಭಾರತದ ಬೌಲಿಂಗ್ ಹೀರೋಗಳೆನಿಸಿದರು. ಚಕ್ರವರ್ತಿ ಅವರ ಮೊದಲ ಓವರ್‌ನಲ್ಲಿ 15 ರನ್ ಸೋರಿಹೋಯಿತಾದರೂ ಅಮೋಘ ಕಮ್ ಬ್ಯಾಕ್ ಮೂಲಕ ಬಾಂಗ್ಲಾವನ್ನು ಕಾಡಿದರು. ಅವರು 3 ವರ್ಷಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದಿದ್ದರು.
Advertisement
ಶರವೇಗಿ ಮಾಯಾಂಕ್ ಯಾದವ್ ಮೊದಲ ಓವರನ್ನೇ ಮೇಡನ್ ಮಾಡಿ ಗಮನ ಸೆಳೆದರು. ಮಾಯಾಂಕ್ ಸಾಧನೆ 21ಕ್ಕೆ 1. ಮಹಮದುಲ್ಲ ಅವರನ್ನು ಔಟ್ ಮಾಡುವ ಮೂಲಕ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಕೆಡವಿದರು. ಪಾಂಡ್ಯ ಮತ್ತು ವಾಷಿಂಗ್ಟನ್ ಅವರಿಗೆ ಒಂದೊಂದು ವಿಕೆಟ್ ಲಭಿಸಿತು.
ಬಾಂಗ್ಲಾ ಪವರ್ ಪ್ಲೇಯಲ್ಲಿ 2ಕ್ಕೆ 39 ರನ್ ಮಾಡಿತು. ಆರಂಭಿಕರಿಬ್ಬರು 14 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಅರ್ಧ ಹಾದಿ ಕ್ರಮಿಸುವ ವೇಳೆ 64ಕ್ಕೆ 5 ವಿಕೆಟ್ ಉರುಳಿತು. 7ನೇ ಕ್ರಮಾಂಕದಲ್ಲಿ ಆಡಲಿಳಿದ ಮೆಹಿದಿ ಹಸನ್ ಮಿರಾಜ್ ಅವರ ಅಜೇಯ 35 ರನ್ ಟಾಪ್ ಸ್ಕೋರ್ ಆಗಿತ್ತು. ನಾಯಕ ನಜ್ಮುಲ್ ಹುಸೇನ್ 27 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-19.5 ಓವರ್‌ಗಳಲ್ಲಿ 127 (ಮಿರಾಜ್ ಔಟಾಗದೆ 35, ನಜ್ಮುಲ್ 27, ಅರ್ಷದೀಪ್ 14ಕ್ಕೆ 3, ಚಕ್ರವರ್ತಿ 31ಕ್ಕೆ 3). ಭಾರತ-11.5 ಓವರ್‌ಗಳಲ್ಲಿ 3 ವಿಕೆಟಿಗೆ 132 (ಪಾಂಡ್ಯ ಔಟಾಗದೆ 39, ಸ್ಯಾಮ್ಸನ್ 29, ಸೂರ್ಯಕುಮಾರ್ 29, ಅಭಿಷೇಕ್ 16, ರೆಡ್ಡಿ ಔಟಾಗದೆ 16). ಪಂದ್ಯಶ್ರೇಷ್ಠ: ಅರ್ಷದೀಪ್ ಸಿಂಗ್.
ಮಾಯಾಂಕ್, ನಿತೀಶ್ ಪದಾರ್ಪಣೆ
ವೇಗಿ ಮಾಯಾಂಕ್ ಯಾದವ್ ಮತ್ತು ಬ್ಯಾಟರ್ ನಿತೀಶ್ ರೆಡ್ಡಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಮಾಯಾಂಕ್‌ಗೆ ಮುರಳಿ ಕಾರ್ತಿಕ್, ನಿತೀಶ್‌ಗೆ ಪಾರ್ಥಿವ್ ಪಟೇಲ್ ಟಿ20 ಕ್ಯಾಪ್ ನೀಡಿದರು. ಇದರೊಂದಿಗೆ 2016ರ ಬಳಿಕ 23ಕ್ಕೂ ಕೆಳ ವಯಸ್ಸಿನ ಭಾರತದ ಇಬ್ಬರು ಆಟಗಾರರು ಒಂದೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ ನಿದರ್ಶನಕ್ಕೆ ಗ್ವಾಲಿಯರ್ ಪಂದ್ಯ ಸಾಕ್ಷಿಯಾಯಿತು. ಅಂದು ಆಸ್ಟ್ರೇಲಿಯ ಎದುರಿನ ಅಡಿಲೇಡ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಒಟ್ಟಿಗೇ ಟಿ20 ಕ್ಯಾಪ್ ಧರಿಸಿದ್ದರು. ಮೊದಲ ಓವರೇ ಮೇಡನ್!
ಮಾಯಾಂಕ್ ಯಾದವ್ ಮೊದಲ ಓವರನ್ನೇ ಮೇಡನ್ ಮಾಡುವ ಮೂಲಕ ಮಿಂಚಿದರು. ಇವರ ಓವರ್‌ನಲ್ಲಿ ತೌಹಿದ್ ಹೃದಯ್ ರನ್ ಗಳಿಸಲು ವಿಫಲರಾದರು. ಮಾಯಾಂಕ್ ಟಿ20 ಅಂತಾರಾಷ್ಟ್ರೀಯ ಪಂದ್ಯದ ಮೊದಲ ಓವರನ್ನೇ ಮೇಡನ್ ಮಾಡಿದ ಭಾರತದ 3ನೇ ಬೌಲರ್. ಉಳಿದವರೆಂದರೆ ಅಜಿತ್ ಅಗರ್ಕರ್ ಮತ್ತು ಅರ್ಷದೀಪ್ ಸಿಂಗ್. ಬಜರಂಗ ದಳದಿಂದ ಪ್ರತಿಭಟನೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಮೇಳಾ ಗ್ರೌಂಡ್ ಮಾರ್ಗವಾಗಿ ಹಾದು ಹೋಗುವಾಗ ಬಜರಂಗ ದಳದ ನೂರಾರು ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು. ಇದನ್ನು ಅವರು ಮುಂದಾಗಿ ಹೇಳಿಕೊಂಡಿದ್ದರು. “ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ನಡೆಸಿಕೊಳ್ಳುವ ರೀತಿಯಿಂದ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ನಾವು ಬಾಂಗ್ಲಾ ಕ್ರಿಕೆಟ್ ತಂಡದ ವಿರುದ್ಧ ಅಪರಾಹ್ನ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಮಧ್ಯ ಭಾರತ್ ಬಜರಂಗ ದಳದ ಉಪಾಧ್ಯಕ್ಷ ಪಪ್ಪು ವರ್ಮ ಹೇಳಿದ್ದರು.