ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧದ ಬೆಂಗಳೂರು ಟೆಸ್ಟ್ ನ ಮೂರನೇ ದಿನದಾಟಕ್ಕೆ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ (Rishabh Pant) ಮೈದಾನಕ್ಕಿಳಿಯಲಿಲ್ಲ. ಎರಡನೇ ದಿನದಾಟದಲ್ಲಿ ಫೀಲ್ಡ್ ನಿಂದ ಹೊರ ನಡೆದಿದ್ದ ಪಂತ್ ಮೂರನೇ ದಿನವೇ ಆಡಲಿಲ್ಲ.
ಬ್ಯಾಕಪ್ ಕೀಪರ್ ಧ್ರುವ್ ಜುರೆಲ್ (Dhruv Jurel) ಅವರು ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ.
ಎರಡನೇ ದಿನದ ಆಟದ ವೇಳೆ ಪಂತ್ ತಮ್ಮ ಬಲ ಮೊಣಕಾಲಿನ ಮೇಲೆ ಪೆಟ್ಟು ಮಾಡಿಕೊಂಡಿದ್ದರಿಂದ ಮೈದಾನದಿಂದ ಹೊರಗುಳಿಯ ಬೇಕಾಯಿತು. ನ್ಯೂಜಿಲ್ಯಾಂಡ್ ನ ಇನಿಂಗ್ಸ್‌ನ 37 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ, ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಚೆಂಡು ತಿರುಗಿ ಪಂತ್ ಅವರ ಕಾಲಿಗೆ ಬಡಿದಿತ್ತು.
ಸುಮಾರು ಎರಡು ವರ್ಷದ ಹಿಂದೆ ಪಂತ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾಗ ಅವರಿಗೆ ಅದೇ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದು ಆತಂಕಕ್ಕೆ ಕಾರಣವಾಗಿದೆ.
“ಹೌದು, ದುರದೃಷ್ಟವಶಾತ್, ಚೆಂಡು ನೇರವಾಗಿ ಅವರ ಮೊಣಕಾಲಿನ ಮೇಲೆ ಹೊಡೆದಿದೆ. ಅದೇ ಕಾಲಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದ್ದರಿಂದ ಅವರ ಕಾಲಿಗೆ ಸ್ವಲ್ಪ ಊತವಾಗಿದೆ” ಎಂದು ಎರಡನೇ ದಿನದಾಟದ ಅಂತ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಶುಭಮನ್ ಗಿಲ್ ಅವರ ಕುತ್ತಿಗೆಯ ಬಿಗಿತದ ಕಾರಣದಿಂದ ಬೆಂಗಳೂರು ಟೆಸ್ಟ್ ಗೆ ಅಲಭ್ಯರಾಗಿದ್ದರು.