ಬೆಂಗಳೂರು: ಪ್ರವಾಸಿ ಕಿವೀಸ್ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಸದ್ಯ ಉಸಿರಾಡುವ ಸ್ಥಿತಿ ತಲುಪಿದೆ. ಮೊದಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಅರ್ಧಶತಕದ ಬಳಿಕ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರು ಶತಕ ಸಿಡಿಸಿ ಟೀಂ ಇಂಡಿಯಾವನ್ನು ಅಪಾಯದಿಂದ ಬಹುತೇಕ ಪಾರು ಮಾಡಿದ್ದಾರೆ.
ಮೂರನೇ ದಿನದಾಟದ ಕೊನೆಯಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಖಾನ್ ಶನಿವಾರ (ಅ.19)ದ ಆಟದಲ್ಲಿ ಆಕರ್ಷಕ ಶತಕ ಬಾರಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬಾರಿಸಿದ ಮೊದಲ ಶತಕ ಇದಾಗಿದೆ.
ಸೌಥಿ ಎಸೆತದಲ್ಲಿ ಕವರ್ ಕಡೆಗೆ ಬೌಂಡರಿ ಬಾರಿಸುವ ಮೂಲಕ ಸರ್ಫರಾಜ್ ಖಾನ್ ಶತಕದ ಮೈಲಿಗಲ್ಲು ಸಾಧಿಸಿದರು. 110 ಎಸೆತಗಳಲ್ಲಿ ಸರ್ಫರಾಜ್ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಶತಕ ಪೂರ್ಣವಾದ ವೇಳೆ ಅವರು 13 ಬೌಂಡರಿ ಫೋರ್ ಮತ್ತು ಮೂರು ಸಿಕ್ಸರ್ ಬಾರಿಸಿದ್ದರು.
ಎರಡನೇ ದಿನದಾಟದಲ್ಲಿ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದ ರಿಷಭ್ ಪಂತ್ ಮತ್ತೆ ಆಟಕ್ಕೆ ಇಳಿದಿದ್ದು ಟೀಂ ಇಂಡಿಯಾ ಕ್ಯಾಂಪ್ ಗೆ ಸಮಾಧಾನ ಮೂಡಿಸಿದೆ. ಅಪಘಾತದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾಲಿಗೆ ಚೆಂಡು ಬಡಿದು ಪಂತ್ ನೋವನುಭವಿಸಿದ್ದರು.
ಶುಕ್ರವಾರದ ಆಟದಲ್ಲಿ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಆಕರ್ಷಕವಾಗಿ ಆಡುತ್ತಿದ್ದರು. ಉತ್ತಮ ಹೊಡೆತಗಳ ಮೂಲಕ ಲಯದಲ್ಲಿದ್ದ ವಿರಾಟ್ ದಿನದ ಕೊನೆಯ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾಗಿದ್ದರು. ಅವರು 70 ರನ್ ಗಳಿಸಿದ್ದರು.
ಭಾರತವು 65 ಓವರ್ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆನ 302 ರನ್ ಗಳಿಸಿದೆ. ಇನ್ನೂ 54 ರನ್ ಹಿನ್ನಡೆಯಲ್ಲಿದೆ.