ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮೆಗಾ ಹರಾಜಿಗೆ (Mega Auction) ಪೂರ್ವ ತಯಾರಿ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾಂಚೈಸಿಗಳು ತಾವು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ.
ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishabh Pant) ಮುಂಬರುವ ಐಪಿಎಲ್ ಹರಾಜಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲಕಾರಿ ಪೋಸ್ಟ್ ಮಾಡಿದ್ದಾರೆ. ರಿಷಭ್ ಪಂತ್ ಅವರು ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು ಮತ್ತು ಅವರನ್ನು ಫ್ರಾಂಚೈಸಿ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಹರಾಜಿಗೆ ಹೋದರೆ ಮಾರಾಟವಾಗ ಬಲ್ಲೆನೆ ಎಂಬ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.
“ಹರಾಜಿಗೆ ಹೋದರೆ ನಾನು ಮಾರಾಟವಾಗುತ್ತೇನೋ ಇಲ್ಲವೋ ಮತ್ತು ಎಷ್ಟಕ್ಕೆ?” ಎಂದು ಪಂತ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಅಭಿಮಾನಿಗಳು ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಹಲವರು ಭಾರತದ ಸ್ಟಾರ್ ಆಟಗಾರ ಹರಾಜು ಪೂಲ್‌ಗೆ ಪ್ರವೇಶಿಸಿದರೆ ಅವರು ಬೃಹತ್ ಮೊತ್ತವನ್ನು ಪಡೆಯಬಹುದೆಂದು ಊಹಿಸಿದ್ದಾರೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಪಂತ್ ತಮ್ಮಲ್ಲೇ ಉಳಿಯಬೇಕು ಎಂದು ಬಯಸಿದ್ದಾರೆ.
ಪಂತ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಮರಳಿದರು. ಡಿಸೆಂಬರ್ 2022 ರಲ್ಲಿ ಅವರು ಮಾರಣಾಂತಿಕ ಕಾರು ಅಪಘಾತವನ್ನು ಅನುಭವಿಸಿದ ನಂತರ ಇದು ಅವರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಸರಣಿ ಆಡಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮಿಂಚಿದರು.