Advertisement
ಇನ್ನೀಗ ಲಾರ್ಡ್ಸ್ ಟೆಸ್ಟ್ ಸರದಿ. ಇದು ಗುರುವಾರದಿಂದ ಆರಂಭವಾಗಲಿದ್ದು, ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಮುಖಾಮುಖೀಯಾಗಲಿವೆ. ಮೇಲಿನೆರಡು ನಿದರ್ಶನಗಳನ್ನು ಕಂಡಾಗ, ಲಕ್ ಇದ್ದರಷ್ಟೇ ಭಾರತಕ್ಕೆ ಲಾರ್ಡ್ಸ್ ಒಲಿದೀತು ಎಂದೇ ಹೇಳಬೇಕಾಗುತ್ತದೆ.
Related Articles
Advertisement
ಇದನ್ನು ಕಂಡಾಗ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತದ ಮುಂದೆ ಕಠಿನವಾದ ಬ್ಯಾಟಿಂಗ್ ಸವಾಲು ಇದ್ದಿತ್ತು ಎಂಬುದನ್ನು ಅಲ್ಲಗಳೆಯುವಂತಿರಲಿಲ್ಲ. ಹೀಗಾಗಿ ಲಾರ್ಡ್ಸ್‌ನಲ್ಲಿ ಲಾರ್ಡ್ ಆಗಬೇಕಾದರೆ ಭಾರತದ ಬ್ಯಾಟಿಂಗ್ ದೊಡ್ಡ ಮಟ್ಟದಲ್ಲಿಯೇ ಸುಧಾರಣೆ ಆಗಬೇಕಾದ ಅಗತ್ಯವಿದೆ.
ಸದ್ಯ ಭಾರತ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಯಾವುದೇ ಬದಲಾವಣೆ ಕಂಡುಬರದು. ಮೊದಲ ಟೆಸ್ಟ್ ಪಂದ್ಯದ ಕಾಂಬಿನೇಶನ್ನೇ ಉಳಿದುಕೊಳ್ಳಲಿದೆ. ಹೀಗಾಗಿ ತಪ್ಪು ತಿದ್ದಿಕೊಂಡು ಕ್ರೀಸ್ ಆಕ್ರಮಿಸಿಕೊಳ್ಳಲು ಇದೊಂದು ಸದವಕಾಶ.
ಅಶ್ವಿನ್, ಇಶಾಂತ್ ರೇಸ್ :
ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಸಾಧ್ಯತೆ ನಿಚ್ಚಳ ವಾಗಿದೆ. ಶಾದೂìಲ್ ಠಾಕೂರ್ ಗಾಯಾಳಾಗಿರುವುದರಿಂದ ಈ ಸ್ಥಾನಕ್ಕೆ ಯಾರು ಎಂಬ ಕುತೂಹಲ ಮೂಡಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗದೆ ಅಚ್ಚರಿಗೆ ಕಾರಣರಾಗಿದ್ದ ಪ್ರಧಾನ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ವೇಗಿ ಇಶಾಂತ್ ಶರ್ಮ ರೇಸ್‌ನಲ್ಲಿದ್ದಾರೆ. ಯಾವುದಕ್ಕೂ ಅಂತಿಮ ಹನ್ನೊಂದರ ಆಯ್ಕೆಯಲ್ಲಿ ಲಾರ್ಡ್ಸ್ ಪಿಚ್ ಪಾತ್ರ ನಿರ್ಣಾಯಕವಾಗಲಿದೆ. 2018ರಲ್ಲಿ ಭಾರತ ಇಲ್ಲಿ ಆಡಿದಾಗ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿ ಇನ್ನಿಂಗ್ಸ್ ಸೋಲಿಗೆ ತುತ್ತಾಗಿತ್ತು. ಇಂಗ್ಲೆಂಡ್ ಅಂಥದೇ “ಗ್ರೀನ್ ಟಾಪ್ ಟ್ರ್ಯಾಕ್’ ಉಳಿಸಿಕೊಂಡರೆ ಅಚ್ಚರಿ ಇಲ್ಲ.
ಬ್ಯಾಟಿಂಗ್ ಆಧರಿಸಿದ ರೂಟ್ :
ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡಿನ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ನಾಯಕ ಜೋ ರೂಟ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್ ಆಕ್ರಮಿಸಿಕೊಂಡು 64 ಹಾಗೂ 109 ರನ್ ಬಾರಿಸದೇ ಹೋಗಿದ್ದರೆ ಸ್ಥಿತಿ ಶೋಚನೀಯವಾಗುತ್ತಿತ್ತು. ಬುಮ್ರಾ ಸೇರಿದಂತೆ ಭಾರತದ ನಾಲ್ಕೂ ಪೇಸ್ ಬೌಲರ್‌ಗಳ ದಾಳಿ ಅತ್ಯಂತ ಘಾತಕವಾಗಿತ್ತು. ಲಾರ್ಡ್ಸ್
ನಲ್ಲಿ ಆರಂಭಕಾರ ರೋರಿ ಬರ್ನ್ಸ್ ಬದಲು ಹಸೀಬ್ ಹಮೀದ್ ಆಡಬಹುದು. ಆಲ್‌ರೌಂಡರ್ ಮೊಯಿನ್ ಅಲಿ ಕೂಡ ರೇಸ್‌ನಲ್ಲಿದ್ದಾರೆ.
ಈ ಬಾರಿ ಇಂಗ್ಲೆಂಡಿಗೆ ಬ್ಯಾಟಿಂಗ್ ಜತೆಗೆ ಬೌಲಿಂಗ್ ಚಿಂತೆಯೂ ಎದುರಾಗಿದೆ. ಪ್ರಧಾನ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇಬ್ಬರೂ ಗಾಯಾಳಾಗಿದ್ದಾರೆ. ಬ್ರಾಡ್ ಬದಲು ಈಗಾಗಲೇ ಲ್ಯಾಂಕಾಶೈರ್ ವೇಗಿ ಶಕೀಬ್ ಮಹಮೂದ್ ಅವರನ್ನು ಸೇರಿಸಿಕೊಳ್ಳಲಾಗಿದೆ. “ಆ್ಯಂಡಿ’ ಫಿಟ್‌ನೆಸ್ ಗುರುವಾರವಷ್ಟೇ ಖಚಿತಗೊಳ್ಳಲಿದೆ. ಇವರಿಬ್ಬರೂ ಹೊರಗುಳಿದರೆ ಭಾರತಕ್ಕೆ ಖಂಡಿತವಾಗಿಯೂ ಲಾಭವಾಗಲಿದೆ.
ಲಾರ್ಡ್ಸ್‌ನಲ್ಲಿ ಎರಡೇ ಸಲ ಭಾರತ ಲಕ್ಕಿ :
ಭಾರತದ ಟೆಸ್ಟ್ ಇತಿಹಾಸ ಬಿಚ್ಚಿಕೊಳ್ಳುವುದೇ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ. 1932ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಭಾರತ, ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ವಿರುದ್ಧ ಇದೇ ಅಂಗಳದಲ್ಲಿ ತನ್ನ ಮೊದಲ ಟೆಸ್ಟ್ ಆಡಿತ್ತು. ಕರ್ನಲ್ ಸಿ.ಕೆ. ನಾಯ್ಡು ಭಾರತ ತಂಡದ ನಾಯಕರಾಗಿದ್ದರು. ಇದನ್ನು ಭಾರತ 158 ರನ್ನುಗಳಿಂದ ಸೋತಿತ್ತು.
ಲಾರ್ಡ್ಸ್‌ನಲ್ಲಿ ಭಾರತ ಈ ವರೆಗೆ ಒಟ್ಟು 18 ಟೆಸ್ಟ್‌ಗಳನ್ನಾಡಿದ್ದು, ಕೇವಲ ಎರಡನ್ನಷ್ಟೇ ಜಯಿಸಿದೆ. 12ರಲ್ಲಿ ಸೋಲನುಭವಿಸಿದೆ. 4 ಪಂದ್ಯ ಡ್ರಾಗೊಂಡಿದೆ.
ಭಾರತ ಲಾರ್ಡ್ಸ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಭರ್ತಿ 54 ವರ್ಷ ಕಾಯಬೇಕಾಯಿತು. 1986ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತ ಇಲ್ಲಿ ಆಡಲಾದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನೇ 5 ವಿಕೆಟ್‌ಗಳಿಂದ ಗೆದ್ದು ಇತಿಹಾಸ ಬರೆಯಿತು. ಸ್ವತಃ ಆಲ್‌ರೌಂಡ್ ಪ್ರದರ್ಶನವಿತ್ತ ಕಪಿಲ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ವೆಂಗ್‌ಸರ್ಕಾರ್ ಅವರ ಅಜೇಯ ಶತಕ (126) ಮತ್ತೂಂದು ಆಕರ್ಷಣೆ ಆಗಿತ್ತು. ಕಿರಣ್ ಮೋರೆ ಅವರ ಪದಾರ್ಪಣ ಟೆಸ್ಟ್ ಪಂದ್ಯವೂ ಇದಾಗಿತ್ತು. ಇಂಗ್ಲೆಂಡ್ ನಾಯಕರಾಗಿದ್ದವರು ಡೇವಿಡ್ ಗೋವರ್.
2014ರಲ್ಲಿ ಕೊನೆಯ ಜಯ :
ಭಾರತ ಇಲ್ಲಿ ಮತ್ತೂಂದು ಜಯ ಕಾಣಲು 2014ರ ತನಕ ಕಾಯಬೇಕಾಯಿತು. ಅಂತರ 5 ವಿಕೆಟ್. ನಾಯಕರಾಗಿದ್ದವರು ಧೋನಿ ಮತ್ತು ಕುಕ್. 319 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಇಶಾಂತ್ ಶರ್ಮ ದಾಳಿಗೆ ತತ್ತರಿಸಿ 223ಕ್ಕೆ ಆಲೌಟ್ ಆಗಿತ್ತು. ಇಶಾಂತ್ ಸಾಧನೆ 74ಕ್ಕೆ 7 ವಿಕೆಟ್. ಭುವನೇಶ್ವರ್ ಕೂಡ ಇಲ್ಲಿ ಮಿಂಚಿದ್ದರು. ಮೊದಲ ಸರದಿಯಲ್ಲಿ 6 ವಿಕೆಟ್ ಕಿತ್ತ ಅವರು, ಬ್ಯಾಟಿಂಗ್‌ನಲ್ಲಿ ಕ್ರಮವಾಗಿ 36 ಮತ್ತು 52 ರನ್ ಬಾರಿಸಿದ್ದರು. ರಹಾನೆ ಅವರ ಶತಕ ಮತ್ತೂಂದು ಆಕರ್ಷಣೆ ಆಗಿತ್ತು (103).
2018ರಲ್ಲಿ ಕೊನೆಯ ಸಲ ಇಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಪಡೆ ಇನ್ನಿಂಗ್ಸ್ ಹಾಗೂ 159 ರನ್ನುಗಳ ಆಘಾತಕಾರಿ ಸೋಲಿಗೆ ತುತ್ತಾಗಿತ್ತು.
ಎರಡೂ ತಂಡಗಳಿಗೆ 2 ಅಂಕ ನಷ್ಟ :
ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಓವರ್ ಗತಿ ಕಾಯ್ದುಕೊಳ್ಳಲು ವಿಫಲವಾದ ಎರಡೂ ತಂಡಗಳಿಗೆ ದಂಡದ ಮೇಲೆ ಬರೆ ಬಿದ್ದಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಎರಡು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಕಡಿತಗೊಳಿಸಲಾಗಿದೆ!
ಇದು ದ್ವಿತೀಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಈ ಮುಖಾಮುಖೀ ಡ್ರಾಗೊಂಡಿದ್ದರಿಂದ ಇತ್ತಂಡಗಳಿಗೆ ತಲಾ 4 ಅಂಕ ಲಭಿಸಬೇಕಿತ್ತು. ಆದರೆ ನಿಧಾನ ಗತಿಯ ಓವರ್‌ನಿಂದಾಗಿ ಕೇವಲ 2 ಅಂಕವಷ್ಟೇ ಸಿಕ್ಕಿದೆ. ಜತೆಗೆ ಪಂದ್ಯದ ಸಂಭಾವನೆಯನ್ನು ಶೇ. 40ರಷ್ಟು ಕಡಿತಗೊಳಿಸಲಾಗಿದೆ.
ಮೊದಲ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಆಸ್ಟ್ರೇಲಿಯಕ್ಕೆ ಸ್ಲೋ ಓವರ್ ರೇಟ್ ಹಾಗೂ ಅಂಕ ಕಡಿತದಿಂದಾಗಿಯೇ ಫೈನಲ್ ಅವಕಾಶ ತಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಬೌಲಿಂಗ್ ದುರ್ಬಲಗೊಳ್ಳಲಿದೆ…
“ಆ್ಯಂಡರ್ಸನ್ ಮತ್ತು ಬ್ರಾಡ್ ಇಬ್ಬರೂ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ ಇಂಗ್ಲೆಂಡ್ ತಂಡಕ್ಕೆ ಖಂಡಿತವಾಗಿಯೂ ಬೌಲಿಂಗ್ ಸಮಸ್ಯೆ ಎದುರಾಗಲಿದೆ. ಇಬ್ಬರೂ ಸೇರಿ ಸಾವಿರಕ್ಕೂ ಹೆಚ್ಚು ವಿಕೆಟ್ ಉರುಳಿಸಿದ್ದಾರೆ. ಆದರೆ ಆ್ಯಂಡರ್ಸನ್ ಸಮಸ್ಯೆ ಬಗ್ಗೆ ನಮಗೆ ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಬ್ರಾಡ್ ಸರಣಿಯಿಂದಲೇ ಹೊರಬಿದ್ದಿದ್ದಾರೆ, ಅಷ್ಟು ಮಾತ್ರ ಗೊತ್ತು’ ಎಂದು ಜಾನಿ ಬೇರ್‌ಸ್ಟೊ ಹೇಳಿದ್ದಾರೆ.
ಸಂಭಾವ್ಯ ತಂಡಗಳು :
ಭಾರತ: ರೋಹಿತ್ ಶರ್ಮ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜ, ಆರ್. ಅಶ್ವಿನ್/ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್/ಹಸೀಬ್ ಹಮೀದ್, ಡಾಮ್ ಸಿಬ್ಲಿ, ಜಾಕ್ ಕ್ರಾಲಿ, ಜೋ ರೂಟ್, ಜಾನಿ ಬೇರ್‌ಸ್ಟೊ, ಡ್ಯಾನ್ ಲಾರೆನ್ಸ್/ಮೊಯಿನ್ ಅಲಿ, ಜಾಸ್ ಬಟ್ಲರ್, ಸ್ಯಾಮ್ ಕರನ್, ಓಲೀ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.