Advertisement

ಟೆಸ್ಟ್‌  ಫಲಿತಾಂಶ: ಐಸಿಸಿಗೆ ಪತ್ರ ಬರೆದ ಇಸಿಬಿ

10:08 PM Sep 12, 2021 | Team Udayavani |

ಲಂಡನ್‌: ಭಾರತ-ಇಂಗ್ಲೆಂಡ್‌ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಅಂತಿಮ ಟೆಸ್ಟ್‌ ಪಂದ್ಯವನ್ನು ಕೋವಿಡ್‌ ಆತಂಕದಿಂದಾಗಿ ರದ್ದುಗೊಳಿಸಲಾಗಿದೆ. ಇದೀಗ ಇದರ ಫ‌ಲಿತಾಂಶವನ್ನು ನಿರ್ಧರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ)ಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌  ಕ್ರಿಕೆಟ್‌ ಮಂಡಳಿ (ಇಸಿಬಿ) ಪತ್ರ ಬರೆದಿದೆ.

Advertisement

ರವಿವಾರ ಪತ್ರ ಬರೆದಿರುವ ಇಸಿಬಿ, ಪಂದ್ಯದ ಪಲಿತಾಂಶವನ್ನು ಶೀಘ್ರದಲ್ಲೇ ನಿರ್ಧರಿಸುವಂತೆ ಕೇಳಿಕೊಂಡಿದೆ. ಇದರೊಂದಿಗೆ ಬಿಸಿಸಿಐ ಹಾಗೂ ಇಸಿಬಿ ನಡುವೆ ಒಮ್ಮತದ ನಿರ್ಧಾರ ಮೂಡಿಬಂದಿಲ್ಲ ಎಂಬುದು ಸಾಬೀತಾಗಿದೆ.

ಭಾರತದ ಪಾಳೆಯದಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡ ಪರಿಣಾಮ ಅಂತಿಮ ಟೆಸ್ಟ್‌ ಆರಂಭಕ್ಕೆ ಎರಡು ತಾಸಿರುವಾಗ ಪಂದ್ಯ ರದ್ದುಗೊಳಿಸಲು ತೀರ್ಮಾನಿಸಲಾಗಿತ್ತು. ಭಾರತೀಯ ಆಟಗಾರರ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್‌ ಬಂದರೂ ಕೋವಿಡ್‌ ಆತಂಕದಿಂದಾಗಿ ಕಣಕ್ಕೆ ಇಳಿದಿರಲಿಲ್ಲ. ಆರಂಭದಲ್ಲಿ ಇಸಿಬಿ, ಈ ಪಂದ್ಯವನ್ನು ಭಾರತ ತ್ಯಜಿಸಿದೆ ಎಂದು ಘೋಷಿಸಿದರೂ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂಬ ಪ್ರಕಟನೆ ಹೊರಡಿಸಿತ್ತು.

ಇನ್ನೊಂದೆಡೆ ಬಿಸಿಸಿಐ ನಿಕಟ ಭವಿಷ್ಯದಲ್ಲಿ ಪಂದ್ಯವನ್ನು ಮರು ನಿಗದಿಗೊಳಿ ಸುವ ಪ್ರಸ್ತಾವವನ್ನು ಮುಂದಿರಿಸಿದೆ. ಆದರೆ ಉಳಿದಿರುವ ಏಕಮಾತ್ರ ಟೆಸ್ಟ್‌ ಈ ಸರಣಿಯ ಭಾಗವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇಸಿಬಿಗೆ ಭಾರೀ ನಷ್ಟ :

Advertisement

5 ಪಂದ್ಯಗಳ ಸರಣಿಯಲ್ಲಿ ಭಾರತ 2-1ಮುನ್ನಡೆ ಕಾಯ್ದುಕೊಂಡಿತ್ತು. ಅಂತಿಮ ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ಐಸಿಸಿ ತೀರ್ಪು ನೀಡಿ ದರೆ ಸರಣಿ 2-2ರಲ್ಲಿ ಸಮಬಲವಾಗಲಿದೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ  ಇಂಗ್ಲೆಂಡ್‌ಗೆ ಪಂದ್ಯದ ನಷ್ಟವನ್ನು ಪಡೆಯುವ ಅವಕಾಶವಿರುತ್ತದೆ. ಆಗ ಬಿಸಿಸಿಐ ನಷ್ಟ ಭರಿಸಬೇಕಾಗುತ್ತದೆ. ವರದಿಯ ಪ್ರಕಾರ ಇಸಿಬಿಗೆ ಸುಮಾರು 40 ಮಿಲಿಯನ್‌ ಪೌಂಡ್‌ಗಳಷ್ಟು ನಷ್ಟವಾಗಿದೆ.

ಏನಾಗಲಿದೆ ತೀರ್ಪು?:

ಈ ಎಲ್ಲ ಗೊಂದಲವನ್ನು ಪರಿಹರಿಸಲು ಐಸಿಸಿ ವಿವಾದ ಇತ್ಯರ್ಥ ಸಮಿತಿಗೆ ಇಸಿಬಿ ಪತ್ರ ಬರೆದಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ ಪಂದ್ಯದ ಫ‌ಲಿತಾಂಶ ಬಹಳ ಮುಖ್ಯವೆನಿಸುತ್ತದೆ. ಆದ್ದರಿಂದ ಐಸಿಸಿ ತೀರ್ಪು ಏನಾಗಿರಲಿದೆ ಎಂಬುದನ್ನು ಎಲ್ಲರೂ ಕುತೂಹಲದಿಂದ ಗಮನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next