ಲಂಡನ್: “ಅದೇ ಹಾಡು ಅದೇ ಪಾಡು’ ಎಂಬಂತಾಗಿದ್ದ ಭಾರತದ ಬ್ಯಾಟಿಂಗಿಗೆ ಕೊನೆಯ ಹಂತದಲ್ಲಿ ಆಲ್‌ರೌಂಡರ್ ಶಾದೂìಲ್ ಠಾಕೂರ್ ಶಕ್ತಿಯ ಟಾನಿಕ್ ಕೊಟ್ಟರೂ ಸ್ಕೋರ್ ಇನ್ನೂರರ ಗಡಿ ತಲುಪಲು ವಿಫಲವಾಗಿದೆ. ಗುರುವಾರ ಮೊದಲ್ಗೊಂಡ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ತೀವ್ರ ಕುಸಿತಕ್ಕೆ ಸಿಲುಕಿದ ಟೀಮ್ ಇಂಡಿಯಾ 191ಕ್ಕೆ ಆಲೌಟ್ ಆಗಿದೆ. ಇಂಗ್ಲೆಂಡ್ 2 ವಿಕೆಟಿಗೆ 43 ರನ್ ಗಳಿಸಿ ಆಡುತ್ತಿದೆ.
ಸರಣಿಯಲ್ಲಿ ಮೊದಲ ಸಲ ಆಡಲಿಳಿದ ಶಾರ್ದೂಲ್ ಠಾಕೂರ್ ಸರ್ವಾಧಿಕ 57 ರನ್ ಬಾರಿಸಿ ಮಿಂಚಿದರು (36 ಎಸೆತ, 7 ಬೌಂಡರಿ, 3 ಸಿಕ್ಸರ್). ನಾಯಕ ವಿರಾಟ್ ಕೊಹ್ಲಿ ಸತತ 2ನೇ ಅರ್ಧ ಶತಕ ದಾಖಲಿಸಿದರು. ಉಳಿದವರ್ಯಾರೂ ಯಶಸ್ಸು ಕಾಣಲಿಲ್ಲ.
ಓವಲ್‌ನಲ್ಲಿ ಇಂಗ್ಲೆಂಡ್ ಕಪ್ತಾನನಿಗೆ ಟಾಸ್ ಒಲಿಯಿತು. ಲೀಡ್ಸ್ ನಲ್ಲಿ ಮೊದಲ ದಿನವೇ ಪ್ರವಾಸಿಗರನ್ನು ಅಲ್ಪ ಮೊತ್ತಕ್ಕೆ ಉದುರಿಸಿದ ನಿದರ್ಶನವಿನ್ನೂ ಕಣ್ಮುಂದೆ ಇದ್ದುದರಿಂದ ರೂಟ್ ಮೊದಲು ಬೌಲಿಂಗನ್ನೇ ಆಯ್ದುಕೊಂಡರು. ಅವರ ನಿರ್ಧಾರ ಯಶಸ್ವಿಯಾಗಲು ಹೆಚ್ಚಿನ ವೇಳೆ ಹಿಡಿಯಲಿಲ್ಲ. ರೋಹಿತ್ ಶರ್ಮ (11), ಕೆ.ಎಲ್. ರಾಹುಲ್ (17) ಮತ್ತು ಚೇತೇಶ್ವರ್ ಪೂಜಾರ (4) ಅವರ ವಿಕೆಟ್ ಲಂಚ್ ಒಳಗಾಗಿ ಬಿತ್ತು. ಭಾರತದ ಮೊದಲ ಅವಧಿಯ ಸ್ಕೋರ್ 3ಕ್ಕೆ 54 ರನ್.
ರಹಾನೆ, ಪಂತ್‌ಗೂ ಮೊದಲೇ ರವೀಂದ್ರ ಜಡೇಜ ಅವರನ್ನು ಬ್ಯಾಟಿಂಗಿಗೆ ಇಳಿಸಲಾಯಿತು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹತ್ತೇ ರನ್ನಿಗೆ ಅವರ ಆಟ ಮುಗಿಯಿತು. 69ಕ್ಕೆ 4 ವಿಕೆಟ್ ಉರುಳಿತು.
ಈ ನಡುವೆ ವಿರಾಟ್ ಕೊಹ್ಲಿ ಸತತ 2ನೇ ಅರ್ಧ ಶತಕ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಆದರೆ ಕಪ್ತಾನನ ಆಟ ಸರಿಯಾಗಿ 50 ರನ್ನಿಗೆ ಕೊನೆಗೊಂಡಿತು (96 ಎಸೆತ, 8 ಬೌಂಡರಿ). 105 ರನ್ ಆಗುವಷ್ಟರಲ್ಲಿ ಅರ್ಧದಷ್ಟು ಮಂದಿಯ ಆಟ ಮುಗಿಯಿತು. ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ವೈಫಲ್ಯ ಇಲ್ಲಿಯೂ ಮುಂದುವರಿಯಿತು. ಅವರ ಗಳಿಕೆ ಬರೀ 14 ರನ್. ಚಹಾ ವಿರಾಮಕ್ಕೂ ಸ್ವಲ್ಪ ಮುನ್ನ ರಹಾನೆ ವಿಕೆಟ್ ಹಾರಿಸಿದ ಇಂಗ್ಲೆಂಡ್ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿತು. 8ನೇ ವಿಕೆಟಿಗೆ ಠಾಕೂರ್-ಉಮೇಶ್ ಯಾದವ್ 63 ರನ್ ಒಟ್ಟುಗೂಡಿಸಿದ್ದರಿಂದ ತಂಡದ ಮೊತ್ತದಲ್ಲಿ ಒಂದಿಷ್ಟು ಪ್ರಗತಿಯಾಯಿತು.
ಅಶ್ವಿನ್‌ಗೆ ಅವಕಾಶವಿಲ್ಲ :
ವಿಶ್ವದ ನಂ.2 ಬೌಲರ್ ಹಾಗೂ ನಂ.4 ಆಲ್‌ರೌಂಡರ್ ಆಗಿರುವ ಆರ್. ಅಶ್ವಿನ್ ಓವಲ್ ಟೆಸ್ಟ್‌ನಲ್ಲೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಂಭವಿಸಿದರೂ ಅಶ್ವಿನ್ ಮಾತ್ರ ಒಳಬರಲಿಲ್ಲ. ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ಬದಲು ಶಾದೂìಲ್ ಠಾಕೂರ್, ಉಮೇಶ್ ಯಾದವ್ ಅವಕಾಶ ಪಡೆದರು.
ಇಂಗ್ಲೆಂಡ್ ತಂಡದಲ್ಲೂ ಎರಡು ಬದಲಾವಣೆ ಸಂಭವಿಸಿತು. ಜಾಸ್ ಬಟ್ಲರ್ ಮತ್ತು ಸ್ಯಾಮ್ ಕರನ್ ಸ್ಥಾನಕ್ಕೆ ಓಲೀ ಪೋಪ್ ಹಾಗೂ ಕ್ರಿಸ್ ವೋಕ್ಸ್ ಬಂದರು. ಜಾನಿ ಬೇರ್‌ಸ್ಟೊ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದರು.