Advertisement

IND V/s ENG: ರಾಹುಲ್‌, ಜಡೇಜ ಸೊಗಸಾದ ಬ್ಯಾಟಿಂಗ್‌- 175 ರನ್‌ ಮುನ್ನಡೆಯಲ್ಲಿ ಭಾರತ

10:52 PM Jan 26, 2024 | Team Udayavani |

ಹೈದರಾಬಾದ್‌: ಕೆ.ಎಲ್‌. ರಾಹುಲ್‌ ಮತ್ತು ರವೀಂದ್ರ ಜಡೇಜ ಅವರ ಸೊಗಸಾದ ಅರ್ಧ ಶತಕ, ಶ್ರೀಕರ್‌ ಭರತ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ಎದುರಿನ ಹೈದರಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ನಿಚ್ಚಳ ಮೇಲುಗೈ ಸಾಧಿಸಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 421 ರನ್‌ ಗಳಿಸಿದ್ದು, 175 ರನ್ನುಗಳ ಭಾರೀ ಮುನ್ನಡೆ ಗಳಿಸಿದೆ.
ಇದೇ ಲಯದಲ್ಲಿ ಸಾಗಿದರೆ ಭಾರತ ಕನಿಷ್ಠ 225 ರನ್‌ ಮುನ್ನಡೆ ಪಡೆಯಬಹುದು. ದ್ವಿತೀಯ ಸರದಿಯಲ್ಲಿ ನಮ್ಮವರ ಸ್ಪಿನ್‌ ದಾಳಿ ತೀವ್ರಗೊಂಡರೆ ಇನ್ನಿಂಗ್ಸ್‌ ಗೆಲುವಿನ ಎಲ್ಲ ಸಾಧ್ಯತೆ ಇದೆ. ಟೆಸ್ಟ್‌ ಮೂರೇ ದಿನದಲ್ಲಿ ಮುಗಿದರೂ ಅಚ್ಚರಿ ಇಲ್ಲ.

Advertisement

ರವೀಂದ್ರ ಜಡೇಜ 81 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಶತಕದ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್‌ ಮತ್ತು ರಾಹುಲ್‌ 80ರ ಗಡಿಯಲ್ಲಿ ಎಡವಿದರು.

ರಾಹುಲ್‌ಗೆ ತಪ್ಪಿತು ಶತಕ
ಮೊದಲ ದಿನ ಯಶಸ್ವಿ ಜೈಸ್ವಾಲ್‌ ಅವರ ಬ್ಯಾಟಿಂಗ್‌ ಅಬ್ಬರ ಕಂಡ ಭಾರತಕ್ಕೆ ಶುಕ್ರವಾರ ರಾಹುಲ್‌, ಜಡೇಜ ಅವರ ಆಕರ್ಷಕ ಬ್ಯಾಟಿಂಗ್‌ ಕಣ್ಣಿಗೆ ಹಬ್ಬವುಂಟುಮಾಡಿತು. ಇಬ್ಬರೂ ಎಚ್ಚರಿಕೆಯ ಬ್ಯಾಟಿಂಗ್‌ನೊಂದಿಗೆ ಆಗಾಗ ಆಕ್ರಮಣಕಾರಿ ಆಟಕ್ಕೂ ಮುಂದಾದರು. ರಾಹುಲ್‌ ಮೇಲೆ 9ನೇ ಶತಕದ ದಟ್ಟ ನಿರೀಕ್ಷೆ ಇತ್ತು. ಆದರೆ ಎಡಗೈ ಸ್ಪಿನ್ನರ್‌ ಟಾಮ್‌ ಹಾಟ್ಲಿ ಅವರ ಎಸೆತವೊಂದು ವಂಚಿಸಿತು. ರೇಹಾನ್‌ ಅಹ್ಮದ್‌ ಕ್ಯಾಚ್‌ ಪಡೆದರು. 123 ಎಸೆತ ಎದುರಿಸಿದ ರಾಹುಲ್‌ 8 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ ಮೆರೆದರು.

ಎಡಗೈ ಆಟಗಾರ ರವೀಂದ್ರ ಜಡೇಜ ಕೂಡ 7 ಬೌಂಡರಿ ಜತೆಗೆ 2 ಸಿಕ್ಸರ್‌ ಬಾರಿಸಿದ್ದಾರೆ. 155 ಎಸೆತ ಎದುರಿಸಿ ನಿಂತಿದ್ದು, ಶನಿವಾರ 4ನೇ ಟೆಸ್ಟ್‌ ಶತಕದ ಸಾಧ್ಯತೆಯೊಂದನ್ನು ತೆರೆದಿರಿಸಿದ್ದಾರೆ.
ಶ್ರೇಯಸ್‌ ಅಯ್ಯರ್‌ 63 ಎಸೆತ ಎದುರಿಸಿ 35 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಸದಾ ಬ್ಯಾಟಿಂಗ್‌ನಲ್ಲಿ ಹಿಂದುಳಿಯುತ್ತಿದ್ದ ಕೀಪರ್‌ ಶ್ರೀಕರ್‌ ಭರತ್‌ ಇಲ್ಲಿ 81 ಎಸೆತಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಇವರದು 41 ರನ್‌ ಕೊಡುಗೆ (3 ಬೌಂಡರಿ).

ಜಡೇಜ ಜತೆ ಕ್ರೀಸ್‌ನಲ್ಲಿರುವ ಅಕ್ಷರ್‌ ಪಟೇಲ್‌ ಕೂಡ ಬ್ಯಾಟಿಂಗ್‌ ಮಿಂಚು ಹರಿಸಿದ್ದು, 62 ಎಸೆತಗಳಿಂದ 35 ರನ್‌ ಮಾಡಿದ್ದಾರೆ. 5 ಬೌಂಡರಿ ಗಳೊಂದಿಗೆ ಒಂದು ಸಿಕ್ಸರ್‌ ಕೂಡ ಎತ್ತಿದ್ದಾರೆ.

Advertisement

ದುಬಾರಿಯಾದ ಸ್ಪಿನ್ನರ್
ಹೈದರಾಬಾದ್‌ನ ಸ್ಪಿನ್‌ ಟ್ರ್ಯಾಕ್‌ ಮೇಲೆ ಇಂಗ್ಲೆಂಡ್‌ ಸ್ಪಿನ್ನರ್ ಯಾವುದೇ ಪ್ರಭಾವ ಬೀರಲಿಲ್ಲ. ಹಾಟ್ಲಿ ಮತ್ತು ಅಹ್ಮದ್‌ ನೂರಕ್ಕೂ ಅಧಿಕ ರನ್‌ ಬಿಟ್ಟು ದುಬಾರಿಯಾದರು.
ಭಾರತ ಒಂದಕ್ಕೆ 119 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. 76 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಯಶಸ್ವಿ ಜೈಸ್ವಾಲ್‌ ಬೇಗನೇ ಔಟಾದರು. ಕೇವಲ 4 ರನ್‌ ಸೇರಿಸಿ ಜೋ ರೂಟ್‌ಗೆ ರಿಟರ್ನ್ ಕ್ಯಾಚ್‌ ನೀಡಿ ವಾಪಸಾದರು. 14 ರನ್‌ ಮಾಡಿ ಆಡುತ್ತಿದ್ದ ಶುಭಮನ್‌ ಗಿಲ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 23 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next