Advertisement

ಹೌಸ್‌ಫುಲ್ ಆಗಲಿದೆ ಹೊಸದಿಲ್ಲಿ ಸ್ಟೇಡಿಯಂ

11:40 PM Feb 14, 2023 | Team Udayavani |

ಹೊಸದಿಲ್ಲಿ: ಟೆಸ್ಟ್‌ ಪಂದ್ಯಕ್ಕೆ ಸಾಮಾನ್ಯವಾಗಿ ವೀಕ್ಷಕರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಭಾರತ-ಆಸ್ಟ್ರೇಲಿಯ ನಡುವೆ ಶುಕ್ರವಾರ ಹೊಸದಿಲ್ಲಿಯಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ಸ್ಟೇಡಿಯಂ “ಫುಲ್ ಹೌಸ್‌’ ಆಗಿರಲಿದೆ ಎಂಬುದೊಂದು ಸಂತೋಷದ ಸಮಾಚಾರ. ಈ ಪಂದ್ಯದ ಎಲ್ಲ ಟಿಕೆಟ್‌ ಈಗಾಗಲೇ ಮಾರಾಟಗೊಂಡಿದೆ.

Advertisement

“ಹೊಸದಿಲ್ಲಿಯಲ್ಲಿ 2017ರ ಬಳಿಕ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯ ಇದಾಗಿದೆ. ಹೀಗಾಗಿ ರಾಜಧಾನಿಯ ಕ್ರಿಕೆಟ್‌ ಪ್ರೇಮಿಗಳೆಲ್ಲ ತೀವ್ರ ಆಸಕ್ತಿ ತಾಳಿದ್ದಾರೆ.

ಟಿಕೆಟ್‌ ಸೋಲ್ಡ್‌ಔಟ್‌ ಆಗಿದೆ’ ಎಂಬುದಾಗಿ ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್‌ ಮಾನ್‌ಚಂದ್‌ ಹೇಳಿದ್ದಾರೆ.

ಹೊಸದಿಲ್ಲಿಯ “ಅರುಣ್ ಜೇಟ್ಲಿ ಸ್ಟೇಡಿಯಂ’ (ಹಿಂದಿನ ಫಿರೋಜ್‌ ಶಾ ಕೋಟ್ಲಾ) 40 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. 8 ಸಾವಿರದಷ್ಟು ಟಿಕೆಟ್‌ ಡಿಡಿಸಿಎ ಸದಸ್ಯರಿಗೆ ಮೀಸಲಾಗಿದೆ.

ಹಾಗೆಯೇ ಪಂದ್ಯದ ಭದ್ರತಾ ಸಿಬಂದಿಯ ಕುಟುಂಬದವರಿಗೆ ನಿರ್ದಿಷ್ಟ ಸ್ಟಾಂಡ್‌ಗಳಲ್ಲಿ ಕೆಲವು ಸೀಟ್‌ಗಳನ್ನು ಕಾದಿರಿಸಲಾಗಿದೆ.

Advertisement

75ರ ಸಂಭ್ರಮ
ಹೊಸದಿಲ್ಲಿ ಸ್ಟೇಡಿಯಂ 75ನೇ ವರ್ಷದ ಸಂಭ್ರಮದಲ್ಲಿದೆ. ಇಲ್ಲಿ ಮೊದಲ ಟೆಸ್ಟ್‌ ನಡೆದದ್ದು 1948ರಲ್ಲಿ. ಅಂದಿನ ಎದುರಾಳಿ ಪ್ರವಾಸಿ ವೆಸ್ಟ್‌ ಇಂಡೀಸ್‌. ಲಾಲಾ ಅಮರನಾಥ್‌ ಮತ್ತು ಜಾನ್‌ ಗೊಡಾರ್ಡ್‌ ನಾಯಕರಾಗಿದ್ದರು. ಬೃಹತ್‌ ಮೊತ್ತಕ್ಕೆ ಸಾಕ್ಷಿಯಾದ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಈವೆರಗೆ ಇಲ್ಲಿ 34 ಟೆಸ್ಟ್‌ ಪಂದ್ಯಗಳನ್ನು ಆಡಲಾಗಿದೆ. ಭಾರತ 13ರಲ್ಲಿ ಜಯ ಸಾಧಿಸಿದ್ದು, 6ರಲ್ಲಿ ಸೋತಿದೆ. ಉಳಿದ 15 ಟೆಸ್ಟ್‌ ಡ್ರಾಗೊಂಡಿದೆ.

ಆಸ್ಟ್ರೇಲಿಯ ವಿರುದ್ಧ 7 ಟೆಸ್ಟ್‌ ನಡೆದಿದ್ದು, ಭಾರತ ಮೂರನ್ನು ಗೆದ್ದು ಒಂದರಲ್ಲಿ ಎಡವಿದೆ. 3 ಪಂದ್ಯಗಳು ಡ್ರಾಗೊಂಡಿವೆ.

ಭಾರತ-ಆಸ್ಟ್ರೇಲಿಯ ಇಲ್ಲಿ ಕೊನೆಯ ಸಲ ಎದುರಾದದ್ದು 2013ರಲ್ಲಿ. ಧೋನಿ ಪಡೆ ಇದನ್ನು 6 ವಿಕೆಟ್‌ಗಳಿಂದ ಜಯಿಸಿತ್ತು. ಅಂದು ಕಾಂಗರೂ ತಂಡದ ನಾಯಕರಾಗಿದ್ದವರು ಶೇನ್‌ ವಾಟ್ಸನ್‌.

ಹೊಸದಿಲ್ಲಿಯಲ್ಲಿ ಕೊನೆಯ ಟೆಸ್ಟ್‌ ನಡೆದದ್ದು 2017ರ ವರ್ಷಾಂತ್ಯದಲ್ಲಿ. ಎದುರಾಳಿ ಶ್ರೀಲಂಕಾ. ಈ ಪಂದ್ಯ ಡ್ರಾಗೊಂಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next