ಪಣಜಿ: ಗೋವಾದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮದುವೆಯಾಗುವುದಕ್ಕೆ ಮುನ್ನ ವಧು-ವರರಿಗೆ ಕಡ್ಡಾಯ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದೆ.
ಗೋವಾ ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಕೌನ್ಸೆಲಿಂಗ್ ಯಾವ ರೀತಿ ನಡೆಯಬೇಕು ಎಂಬುದರ ನಿಯಮಗಳನ್ನು ಅಂತಿಮಗೊಳಿಸಲಿದೆ ಎಂದು ಕಾನೂನು ಸಚಿವ ನಿಲೇಶ್ ಕಾಬ್ರಾಲ್ ಹೇಳಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಎಷ್ಟು ಮದುವೆಗಳಾಗಿವೆಯೋ ಅಷ್ಟೇ ಸಂಖ್ಯೆಯ ವಿವಾಹ ವಿಚ್ಛೇದನ ಪ್ರಕರಣಗಳು ಆಗಿರುವುದು ಆತಂಕಕಾರಿ. ಮುಂದಿನ ದಿನ ಗಳಲ್ಲಿ ಅದನ್ನು ತಪ್ಪಿಸುವುದಕ್ಕಾಗಿ ಮದುವೆಗೆ ಮುನ್ನ ಕಡ್ಡಾಯವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.
ನೂತನವಾಗಿ ದಾಂಪತ್ಯ ಜೀವನ ಪ್ರವೇಶಲಿರುವವ ಯುವ ಜೋಡಿಗಳಿಗೆ ಮದುವೆ ಎಂದರೆ ಏನು ಎಂದು ಕೌನ್ಸೆಲಿಂಗ್‌ನಲ್ಲಿ ವಿವರಿಸಲಾಗುತ್ತದೆ. ಯಾವುದಾದರೂ ಧಾರ್ಮಿಕ ಸಂಸ್ಥೆಗಳು ಸರಕಾರದ ಈ ಯೋಜನೆ ಜತೆಗೆ ಕೈಜೋಡಿಸಲು ಬಂದಲ್ಲಿ ಸ್ವಾಗತವಿದೆ ಎಂದು ಕಾಬ್ರಾಲ್ ವಿವರಿಸಿದ್ದಾರೆ.
ಗೋವಾದ ಕಾನೂನು ಪ್ರಕಾರ ಮೊದಲು ಯುವ ಜೋಡಿ ವಿವಾಹವಾಗುವ ಬಗ್ಗೆ ಸಮ್ಮತಿ ಸೂಚಿಸಿ ವಿವಾಹ ನೋಂದಣಾಧಿಕಾರಿ ಮುಂದೆ ಸಹಿ ಹಾಕಬೇಕು. ಮೊದಲ ಸಹಿ ಹಾಕಿದ ದಿನದಿಂದ 15 ದಿನಗಳ ಒಳಗಾಗಿ, ಅದೇ ಸಕ್ಷಮ ಪ್ರಾಧಿಕಾರಿಯ ಮುಂದೆ 2ನೇ ಬಾರಿಗೆ ಸಹಿ ಹಾಕಬೇಕು. ಮೂರು ತಿಂಗಳ ಬಳಿಕ ವಿವಾಹ ಆಗಿರುವ ಬಗ್ಗೆ ಅಧಿಕೃತವಾಗಿ ನೋಂದಣಿ ಮಾಡಿಸಬೇಕು.
ವಧು ಮತ್ತು ವರನಿಗೆ ಮೊದಲು ಎರಡೂ ಮನೆಗಳ ಸದಸ್ಯರ ಜತೆಗೆ ಯಾವ ರೀತಿಯ ಬಾಂಧವ್ಯ ಹೊಂದಬೇಕು, ಮದುವೆಯಾಗಿ ಪತಿಯ ಮನೆಗೆ ಬರುವ ನೂತನ ವಧು ಅಲ್ಲಿ ಯಾವ ರೀತಿ ಬಾಂಧವ್ಯ ವೃದ್ಧಿಸಿಕೊಳ್ಳಬೇಕು ಮತ್ತು ಸಮಾಜದಲ್ಲಿ ಹೇಗೆ ಇರಬೇಕು ಎಂಬುದರ ಬಗ್ಗೆ ಅವರಿಗೆ ತಿಳಿಸಿ ಹೇಳಬೇಕಾಗಿದೆ ಎಂದು ಗೋವಾ ರಾಜ್ಯದ ನೋಂದಣಾಧಿಕಾರಿ ಅಶುತೋಷ್ ಆಪ್ಟೆ ಹೇಳಿದ್ದಾರೆ.