ಉಡುಪಿ: ಸಮರ್ಥ ನಾಯಕತ್ವವಿದ್ದರೆ ಸೈನಿಕರ ಮನೋಬಲ ಹೆಚ್ಚುತ್ತದೆ. ನಮ್ಮ ದೇಶದಲ್ಲಿ ಇಂದು ಸಮರ್ಥ ನಾಯಕತ್ವ ಇದೆ. ಹಾಗಾಗಿ ಹಿಂದಿಗಿಂತಲೂ ಇಂದು ಸೈನಿಕರ ಮನೋಬಲ ಹೆಚ್ಚಾಗಿದೆ ಎಂದು ನಿವೃತ್ತ ಯೋಧ ಗಿಲ್ಬರ್ಟ್ ಬ್ರಿಗಾಂಝಾ ಹೇಳಿದರು.
ಶನಿವಾರ ಮಣಿಪಾಲ ಐನಾಕ್ಸ್ ಚಿತ್ರಮಂದಿರದಲ್ಲಿ ಮಲ್ಪೆಯ ಎಂಸಿಎಲ್ ತಂಡದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಆಯೋಜಿಸಲಾದ ‘ಉರಿ ದ ಸರ್ಜಿಕಲ್ ಸ್ಟ್ರೈಕ್’ ಸಿನೆಮಾ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶಪ್ರೇಮವೆಂಬುದು ಪ್ರತಿಯೊಬ್ಬನ ಭಾರತೀಯರ ಹೃದಯದಲ್ಲಿದೆ. ಯೋಧ ಭಾರತ ಮಾತೆಯ ರಕ್ಷಣೆಗಾಗಿ ತನ್ನ ಬಂಧುಗಳನ್ನು ಕೂಡ ಬಿಟ್ಟು ಹೋಗುತ್ತಾನೆ. ನಮಗೆ ದೇಶಸೇವೆಯ ಅವಕಾಶ ಸಿಕ್ಕಿದಾಗ ಅದನ್ನು ಮುಕ್ತವಾಗಿ ಸ್ವೀಕರಿಸಬೇಕು. ಉರಿ ಸಿನೆಮಾವು ಭಾರತೀಯ ಸೈನಿಕರು ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ನಮ್ಮ ಸೈನಿಕರ ಸಾಹಸವನ್ನು ತೆರೆದಿಡುತ್ತದೆ. ಇಂತಹ ಸಿನೆಮಾ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ನೋಡುವಂತಾಗಬೇಕು ಎಂದವರು ಹೇಳಿದರು.
ಮಾಜಿ ಸೈನಿಕರಾದ ಜಗದೀಶ್ ಪ್ರಭು, ಹಿರಿಯಡಕ ಸೈಮನ್ ಡಿ’ಸೋಜ ಮಣಿಪಾಲ, ಮೋಹನ್ ಕುಮಾರ್ ಆತ್ರಾಡಿ, ಉಪೇಂದ್ರ ನಾಯಕ್ ಕಾಜಾರಗುತ್ತು, ಡಿ.ಕೆ. ಸಾಲ್ಯಾನ್ ಕೊಡವೂರು, ನವೀನ್ ಕುಮಾರ್ ಭಂಡಾರಿ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ರಮೇಶ ಕೋಟ್ಯಾನ್, ಸಾಧು ಸಾಲ್ಯಾನ್ ಉಪಸ್ಥಿತರಿದ್ದರು.
ಎಂಸಿಎಲ್ ತಂಡದ ಸದಸ್ಯ ಯೋಗೀಶ್ ವಿ.ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಎಂಸಿಎಲ್ ಇತರ ಸದಸ್ಯರು ಪಾಲ್ಗೊಂಡಿದ್ದರು.
ವಡಭಾಂಡೇಶ್ವರದ ಸರಕಾರಿ ಪ್ರೌಢಶಾಲೆ ಮತ್ತು ಮಲ್ಪೆ ಮೀನುಗಾರಿಕಾ ಪ್ರೌಢಶಾಲೆಯ ಒಟ್ಟು 175 ವಿದ್ಯಾರ್ಥಿಗಳು , 25 ಶಿಕ್ಷಕರು ಸಿನೆಮಾ ವೀಕ್ಷಿಸಿದರು.