Advertisement

ಏರುತ್ತಿದೆ ಬಿಸಿಲಿನ ತಾಪಮಾನ: ಪಕ್ಷಗಳಿಗೆ ಪ್ರಚಾರದ್ದೇ ಸಮಸ್ಯೆ

09:43 PM Apr 09, 2019 | Lakshmi GovindaRaju |

ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಕಾವು ದಿನನಿತ್ಯ ಏರುತ್ತಿರುವುದಲ್ಲದೇ, ಬಿಸಿಲಿನ ತಾಪಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಹೈರಾಣಾಗುತ್ತಿದ್ದಾರೆ.

Advertisement

ಗರಿಷ್ಠ 37 ಡಿಗ್ರಿ ಉಷ್ಣಾಂಶ ತುಲುಪಿರುವ ಚನ್ನರಾಯಪಟ್ಟಣ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಮಾಡುವುದೇ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿದೆ ಪರಿಣಮಿಸಿದೆ, ಕ್ಷೇತ್ರ ನಿಗಿನಿಗಿ ಕೆಂಡದಂತಾಗಿರುವುದರಿಂದ ಬೆಳಗ್ಗೆ 7 ಗಂಟೆಗೆ ಪ್ರಚಾರ ಕಾರ್ಯ ಪ್ರಾರಂಭಿಸಿ ಮಧ್ಯಾಹ್ನ 12.30ಕ್ಕೆ ಸ್ಥಗಿತಮಾಡಿ ಸಂಜೆ 5 ಗಂಟೆ ಮೇಲೆ ಪುನಃ ಪ್ರಾರಂಭ ಮಾಡುತ್ತಿದ್ದಾರೆ.

ಬಿಸಿಲಿಗೆ ಬಂದರೆ ಧರಿಸಿರುವ ಬಟ್ಟೆ ಬೆವರಿನಿಂದ ಒದ್ದೆಯಾಗುತ್ತಿರುವಾಗ ಬಹಿರಂಗ ಪ್ರಚಾರ ಮಾಡುವುದಾದರೂ ಹೇಗೆ? ಜನರ ಮನೆ ಮನೆ ಬಾಗಿಲು ತಟ್ಟುವುದು ತಟ್ಟುವುದು ಹೇಗೆ? ಆದರೂ ಪಕ್ಷ ನಿಷ್ಠೆ ಬಿಡುವಂತಿಲ್ಲ ಏನು ಮಾಡೋಣ? ಮತದಾನಕ್ಕೆ ಕೇವಲ ಎಂಟು ದಿವಸ ಬಾಕಿ ಇರುವಾಗ ಪ್ರತಿ ಹಳ್ಳಿ ತಲುಪಲು ಪಕ್ಷಗಳು ಪ್ರಚಾರ ಮಾಡಬೇಕಿದೆ. ಆದರೆ ಸೂರ್ಯ ನೆತ್ತಿ ಮೇಲೆ ಬರುತ್ತಿದಂತೆ ಬಿಸಿಲ ಝಳ ಹೆಚ್ಚುತ್ತಿದ್ದು ಅಬ್ಬರದ ಪ್ರಚಾರಕ್ಕೆ ಕಾರ್ಯಕರ್ತರು ರಸ್ತೆಗೆ ಇಳಿಯದಂತಾಗಿದೆ.

ಹೆಚ್ಚುತ್ತಿದೆ ತಾಪಮಾನ: ತಾಲೂಕಿನಲ್ಲಿ ಈಗ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ, ಯುಗಾದಿ ಹಬ್ಬದ ದಿವಸ ಕನಿಷ್ಠ 32, ಗರಿಷ್ಠ 34 ಡಿಗ್ರಿ ಉಷ್ಣಾಂಶವಿತ್ತು, ಈ ವಾರದಲ್ಲಿ ಕನಿಷ್ಠ 28 ರಿಂದ 37 ಡಿಗ್ರಿ ಉಷ್ಣಾಂಶ ತಲುಪಿದೆ, ಆದಾಗ್ಯೂ ಅಭ್ಯರ್ಥಿಗಳ ಪರವಾಗಿ ತಾಲೂಕಿನ ಜೆಡಿಎಸ್‌-ಕಾಂಗ್ರೆಸ್‌ (ಮೈತ್ರಿ) ಮತ್ತು ಬಿಜೆಪಿ ಪಕ್ಷದ ಮುಖಂಡರು ಅನಿವಾರ್ಯವಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಕಣದಲ್ಲಿನ ಐದಾರು ಪಕ್ಷೇತರ ಅಭ್ಯರ್ಥಿಗಳು ಬಿಸಿಲಿನ ತಾಪಕ್ಕಾಗಿ ಇದುವರೆವಿಗೆ ತಾಲುಕಿನ ಒಂದು ಗ್ರಾಮದಲ್ಲಿಯೂ ಮತಯಾಚನೆ ಮಾಡುವ ಗೋಜಿಗೆ ಹೋಗಿಲ್ಲ.

ಎರಡ್ಮೂರು ಗ್ರಾಮಕ್ಕೆ ಒಂದೇ ಕಡೆ ಪ್ರಚಾರ: ಬಿಸಿಲ ತಾಪಮಾನ ಹೆಚ್ಚುತ್ತಿರುವುದರಿಂದ ರಾಜಕೀಯ ಮುಖಂಡರು ಎರಡ್ಮೂರು ಗ್ರಾಮಗಳನ್ನು ಒಟ್ಟಿಗೆ ಸೇರಿಸಿ ಸಭೆ ಮಾಡುವ ಮೂಲಕ ತಮ್ಮ ಕೆಲಸ ಸುಲಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಗ್ರಾಮಸ್ಥರು ಬಿಸಿಲು ಹೆಚ್ಚಾಗಿರುವುದರಿಂದ ತಮ್ಮ ಪಕ್ಕದ ಗ್ರಾಮದಲ್ಲಿ ನಡೆಯುವ ಸಭೆಗಳಿಗೆ ಆಗಮಿಸುತ್ತಿಲ್ಲ.

Advertisement

ಮೈತ್ರಿಯಲ್ಲಿ ಏಕಾಂಗಿ ಪ್ರಚಾರ: ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರವಾಗಿ ಶಾಸಕ ಸಿ.ಎನ್‌.ಬಾಲಕೃಷ್ಣ ತಮ್ಮ ಹಿಂಬಾಲಕರೊಂದಿಗೆ ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದ ಮುಖಂಡರು ಪ್ರಚಾರಕ್ಕೆ ಇದುವರೆ ಗೂ ಆಗಮಿಸಿಲ್ಲ. ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಗೂ ಶಾಸಕ ಪ್ರೀತಂ ಜಿ. ಗೌಡ ತಾಲೂಕಿನಲ್ಲಿ ಎರಡ್ಮೂರು ದಿವಸ ಮಾತ್ರ ಪ್ರಚಾರ ಮಾಡಿದ್ದು ಉಳಿದಂತೆ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ಧಾರೆ.

ಎರಡು ಲಕ್ಷ ಮಂದಿ ತಲುಪಬೇಕು: ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಹಿಳೆ 1,00705 ಪುರುಷರು 1,00714 ಮತ್ತು ತೃತೀಯ ಲಿಂಗಿ 05 ಮಂದಿಸೇರಿದಂತೆ ಒಟ್ಟು 2,01424 ಮಂದಿ ಮತದಾರರಿದ್ದು ಇವರುಗಳನ್ನು ಎಂಟು ದಿವಸದಲ್ಲಿ ತಲುಪುವುದು ರಾಜಕೀಯ ಪಕ್ಷಗಳ ಸಾಮರ್ಥ್ಯಕ್ಕೂ ಮೀರಿದ್ದಾಗಿದೆ.

ಈ ಉರಿಬಿಸಿಲಿನಲ್ಲಿ ಬೆವರು ಹರಿಸಿಕೊಂಡು ದುಡಿಯುವುದು ಕಷ್ಟ ಸಾಧ್ಯವಾಗುತ್ತಿದೆ, ರಾತ್ರಿ ವೇಳೆ ಹೆಚ್ಚು ಸಮಾವೇಶ ಮಾಡೊಣವೆಂದರೆ ಚುನಾವಣಾ ನೀತಿ ಸಂಹಿತಿ ಪ್ರಕಾರ 10 ಗಂಟೆಯ ಮೇಲೆ ವೇದಿಕೆ ಖಾಲಿ ಮಾಡಬೇಕು, ಹೀಗಾಗಿ ಒಂದೆಡೆ ಚುನಾವಣಾ ಕಾನೂನು ಪಕ್ಷಗಳಿಗೆ ಕಾಡುತ್ತಿದ್ದರೆ ಮತ್ತೂಂದೆಡೆ ಬೇಸಿಗೆಯ ತಾಪಮಾನ ಅಭ್ಯರ್ಥಿಗಳನ್ನು ಸುಡುತ್ತಿದೆ.

ಸೌತೆಕಾಯಿ ಕಲ್ಲಂಗಡಿಗೆ ಡಿಮ್ಯಾಂಡ್‌: ಬೆಳಗ್ಗೆ 10 ಗಂಟೆ ಆಯಿತೆಂದರೆ ರಣಬಿಸಿಲಿನಲ್ಲಿ ಪ್ರಚಾರ ನಡೆಸುವವರಿಗೆ ತಿನ್ನಲು ಸೌತೆಕಾಯಿ, ಕಲ್ಲಂಗಡಿಯೊಂದಿಗೆ ವಾಟರ್‌ ಬಾಟಲ್‌ಗ‌ಳು ಬೇಕೇ ಬೇಕು ಎಂಬ ಬೇಡಿಕೆಯನ್ನು ಕಾರ್ಯಕರ್ತರು ತಮ್ಮ ಪಕ್ಷ ಮುಖಂಡರ ಮುಂದಿಟ್ಟಿದ್ದಾರೆ. ಹೀಗಾಗಿ ಸೌತೆಯಾಕಿ ಕಲ್ಲಂಗಡಿ ಡಿಮ್ಯಾಂಡ್‌ ಶುರುವಾಗಿದೆ. ಗ್ರಾಮಗಳಿಗೆ ಆಗಮಿಸಿದ ಮುಖಂಡರನ್ನು ಮನೆಗೆ ಕರೆಯುವ ಕಾರ್ಯಕರ್ತರು ಮಜ್ಜಿಗೆ ನೀಡುವ ಮೂಲಕ ಕೊಂಚ ಮಟ್ಟಿಗೆ ದಣಿವಾರಿಸುತ್ತಿದ್ದಾರೆ.

ಮಹಿಳೆಯರಿಲ್ಲ: ಪ್ರತಿ ಚುನಾವಣೆಯಲ್ಲಿ ಮಹಿಳೆಯರ ಅಬ್ಬರ ಹೆಚ್ಚಾಗಿರುತ್ತಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಯಾವ ಪಕ್ಷದವರು ಮಹಿಳಾ ಕಾರ್ಯಕರ್ತರನ್ನು ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ. ಹಲವು ಪಕ್ಷಗಳು ತಮ್ಮ ಮಹಿಳಾ ಕಾರ್ಯಕರ್ತೆಯರ ಮೂಲಕ ಸ್ತ್ರೀಶಕ್ತಿ ಸಂಘಟನೆಯನ್ನು ಸಂಪರ್ಕ ಮಾಡಿವೆಯಾದರೂ ಬಿರು ಬೇಸಿಗೆ ಇರುವುದರಿಂದ ಮಹಿಳಾ ಮಣಿಯರು ಬೀದಿಗಿಳಿದು ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಎದುರಾಳಿಯ ಹೊಡೆತದೊಂದಿಗೆ ಸೂರ್ಯನ ಬಿಸಿಯನ್ನು ಅಭ್ಯರ್ಥಿಗಳು ಎದುರಿಸಬೇಕಾಗಿದೆ.

ಎನ್‌ ಬಿಸ್ಲು ಸರ್‌ ಬಿಸಿಲ ತಾಪಕ್ಕೆ ವೇದಿಕೆ ಮೇಲೆ ಕೂರಲು ಸಾಧ್ಯವಾಗುತ್ತಿಲ್ಲ. ಇಂತಹಾ ತಾಪಮಾನದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸುವುದು ಎಂದರೆ ಹುಡುಗಾಟವಲ್ಲ. ಬೆವರು ಇಳಯುತ್ತಿದ್ದು, ದಿನಕ್ಕೆ ಎರಡು ಬಾರಿ ಸ್ನಾನ ಮಾಡಲಾಗುತ್ತಿದೆ. ಇನ್ನು ಎಂಟು ದಿವಸ ಪ್ರಚಾರ ಹೇಗೆ ಮಾಡುವುದು ಎಂಬ ಚಿಂತೆಯಾಗಿದೆ.
-ಸಿ.ಎನ್‌.ಬಾಲಕೃಷ್ಣ ಶಾಸಕ ಶ್ರವಣಬೆಳಗೊಳ ಕ್ಷೇತ್ರ.

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next