Advertisement

ರಾಜ್ಯದ ಮಳೆ ಹಂಚಿಕೆಯಲ್ಲಿ ಹೆಚ್ಚುತ್ತಿದೆ ಅಸಮತೋಲನ

10:49 PM Aug 02, 2019 | Lakshmi GovindaRaj |

ಬೆಂಗಳೂರು: ರಾಜ್ಯಕ್ಕೆ ಅತಿ ಹೆಚ್ಚು ಮಳೆ ಸುರಿಸುವ ಪ್ರದೇಶಗಳು ಹಾಗೂ ಅತ್ಯಧಿಕ ಮಳೆ ಬೀಳುವ ಅವಧಿಯಲ್ಲೇ ಪ್ರಸಕ್ತ ಸಾಲಿನಲ್ಲಿ ಮುಂಗಾರು ಖೋತಾ ಆಗಿದೆ. ಇದಕ್ಕೆ ತದ್ವಿರುದ್ಧವಾಗಿ ಬರಕ್ಕೆ ತುತ್ತಾಗುವ ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆ ಆಗುತ್ತಿದೆ. ಈ ಅಸಮತೋಲನವು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

ಇಡೀ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಬೀಳುವ ಮಳೆ ಸರಾಸರಿ 860 ಮಿ.ಮೀ. ಈ ಪೈಕಿ ಜುಲೈ ಅಂತ್ಯಕ್ಕೇ 30ರಿಂದ 40ರಷ್ಟು ಮಳೆ ಆಗುತ್ತದೆ. ಅದರಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲೇ ಭಾಗಶ: ಸುರಿಯುತ್ತದೆ. ಆದರೆ, ಮಳೆ ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದೆ. ಇದರಿಂದ ಕೃಷಿ ಜತೆಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ.

ಕರಾವಳಿ ಪ್ರದೇಶ ಅದರಲ್ಲೂ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದ ಬೇಸಿಗೆಯಲ್ಲಿ ಬಾವಿಗಳು ಬತ್ತಿದ್ದರಿಂದ ನೀರಿಗಾಗಿ ಹಾಹಾಕಾರ ಎದ್ದಿತ್ತು. ಅದೇ ಭಾಗದಲ್ಲಿ ಕ್ರಮವಾಗಿ ಶೇ.34 ಮತ್ತು ಶೇ.9ರಷ್ಟು ಮಳೆ ಇಳಿಮುಖವಾಗಿದೆ. ವಾಡಿಕೆಯಂತೆ ಜೂನ್‌ 1ರಿಂದ ಜುಲೈ 31ರವರೆಗೆ ದಕ್ಷಿಣ ಕನ್ನಡದಲ್ಲಿ 2,188.7 ಮಿ.ಮೀ. ಹಾಗೂ ಉಡುಪಿಯಲ್ಲಿ 2,462.1 ಮಿ.ಮೀ.ಮಳೆ ಆಗಬೇಕಿತ್ತು. ಕ್ರಮವಾಗಿ 1,434.6 ಹಾಗೂ 2,247.9 ಮಿ.ಮೀ.ಮಳೆ ಬಿದ್ದಿದೆ. ಉತ್ತರ ಕನ್ನಡದಲ್ಲಿ ವಾಡಿಕೆಯಂತೆ 1,788.8 ಮಿ.ಮೀ.ಮಳೆಯಾಗಿದೆ.

ಅದೇ ರೀತಿ, ಘಟ್ಟ ಪ್ರದೇಶಗಳಾದ ಹಾಸನದಲ್ಲಿ ಶೇ.43, ಕೊಡಗು ಶೇ. 41, ಶಿವಮೊಗ್ಗ ಶೇ.23, ಚಿಕ್ಕಮಗಳೂರು ಶೇ.29, ಚಾಮರಾಜನಗರ ಜಿಲ್ಲೆಯಲ್ಲಿ ಶೇ.40ರಷ್ಟು ಮಳೆ ಕಡಿಮೆ ಆಗಿದೆ. ಒಟ್ಟಾರೆ ದಕ್ಷಿಣ ಒಳನಾಡಿನಲ್ಲಿ ಶೇ.26ರಷ್ಟು ಕೊರತೆ ಕಂಡು ಬಂದಿದೆ. ಮತ್ತೂಂದೆಡೆ, ಉತ್ತರ ಕರ್ನಾಟಕದಲ್ಲಿ ವಾಡಿಕೆ ಮಳೆ 234.9 ಮಿ.ಮೀ.ಇದ್ದು, 244.2 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಸ್ಪಷ್ಟಪಡಿಸಿದೆ.

ಒಂದೆರಡು ವಾರ ಮಳೆ ಕಡಿಮೆ?: ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಿರುತ್ತದೆ. ಆದರೆ, ಈ ಬಾರಿ ಆ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದೆ. ಮುಂದಿನ ಒಂದೆರಡು ವಾರ ಕೂಡ ಮಳೆಯ ಲಕ್ಷಣ ಕಡಿಮೆ. ಈ ಮಧ್ಯೆ, ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾ ಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಪ್ರಭಾರ ನಿರ್ದೇಶಕ ಸಿ.ಎಸ್‌. ಪಾಟೀಲ ತಿಳಿಸಿದರು.

Advertisement

ಇತ್ತೀಚಿನ ದಿನಗಳಲ್ಲಿ ಮಳೆಯ ಹಂಚಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕಳೆದ ಐದು ವರ್ಷಗಳಿಂದ ವಾಡಿಕೆಗಿಂತ ಕಡಿಮೆ ಮಳೆ ಆಗುತ್ತಿದೆ. ಇದು ಹವಾಮಾನ ವೈಪರೀತ್ಯದ ಸ್ಪಷ್ಟ ಸೂಚನೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಾದರೆ, ಕೃಷಿ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಕೈಕೊಟ್ಟರೆ ಜಲಾಶಯ ಗಳಿಗೆ ನೀರಿನ ಹರಿವು ಕಡಿಮೆ ಆಗುತ್ತದೆ. ಅದು ನಾನಾ ರೀತಿಯಲ್ಲಿ ಹೊಡೆತ ಬೀಳುತ್ತದೆ ಎನ್ನುತ್ತಾರೆ ತಜ್ಞರು.

ಗಂಭೀರ ಪರಿಣಾಮದ ಆತಂಕ: ಮಳೆಯ ಹಂಚಿಕೆಯಲ್ಲಿ ವ್ಯತ್ಯಾಸವಾದಾಗ, ಆ ಭಾಗದ ಮೀನುಗಾರಿಕೆ, ಕೃಷಿ, ಅಂತರ್ಜಲ, ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಅಪರೂಪದ ಮೀನುಗಳು ಕಣ್ಮರೆ ಆಗಬಹುದು. ಕಳೆದ ವರ್ಷ ಕುಮಟಾದಲ್ಲಿ ಒಂದು ಪ್ರಕಾರದ ಚಿಪ್ಪು ಸಿಗಲೇ ಇಲ್ಲ. ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ 1901ರಿಂದ 1965ರಲ್ಲಿ 3,000-4,500 ಮಿ.ಮೀ.ಮಳೆ ಆಗುತ್ತಿತ್ತು. ನಂತರದ ದಿನಗಳಲ್ಲಿ ಮಳೆ ಪ್ರಮಾಣ 1,900 ಮಿ.ಮೀ.ಗೆ ಕುಸಿದಿದೆ. ಅಲ್ಲಿನ ಒಂದು ಪ್ರದೇಶದಲ್ಲಿ ಮಾತ್ರ 3,400 ಮಿ.ಮೀ.ಮಳೆ ಆಗುತ್ತಿದೆ ಎಂದು ಅಧ್ಯಯನದಿಂದ ಕಂಡು ಬಂದಿದೆ. ಇದೇ ರೀತಿ ಮುಂದುವರಿದರೆ, ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ತಿಳಿಸುತ್ತಾರೆ.

ಇನ್ಮುಂದೆ ಹೀಗೇ; ಡಾ.ರಾಜೇಗೌಡ: ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ನಡುವೆ ವಾತಾವರಣದ ಒತ್ತಡದಲ್ಲಿನ ವ್ಯತ್ಯಾಸ ಹೆಚ್ಚಾದಾಗ, ಅಧಿಕ ಮೋಡಗಳು ಸೃಷ್ಟಿಯಾಗುತ್ತವೆ. ಇದರಿಂದ ಉತ್ತರ ಗೋಳಾರ್ಧದಲ್ಲಿ ಮಳೆ ಬೀಳುತ್ತದೆ. ಆದರೆ, ಈ ಬಾರಿ ಮೋಡಗಳ ಸಂಖ್ಯೆಯೇ ಕಡಿಮೆ ಆಗಿದೆ. ಗರಿಷ್ಠ ಉಷ್ಣಾಂಶ ಕಂಡು ಬರಲಿಲ್ಲ. ಇದೆಲ್ಲವೂ ಹವಾಮಾನ ವೈಪರೀತ್ಯದ ಪರಿಣಾಮಗಳಾಗಿವೆ. ಇನ್ಮುಂದೆ ಮಳೆ ಕೊರತೆ ಹೀಗೇ ಮುಂದುವರಿಯುವ ಸಾಧ್ಯತೆ ಇದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಅಲ್ಪಾವಧಿ ಬೆಳೆಗಳತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಕೃಷಿ ಹವಾಮಾನ ತಜ್ಞ ಡಾ.ಎಂ.ಬಿ.ರಾಜೇಗೌಡ ಸ್ಪಷ್ಟಪಡಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next