ಕೆ.ಆರ್.ನಗರ: ಅನೇಕ ಮಹನೀಯರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯದೊರೆತಿದ್ದು, ಇಂದು 71ನೇ ಸ್ವಾತಂತ್ರ್ಯೋತ್ಸವ ಆಚರಿಸುತಿದ್ದೇವೆ. ಆದರೂ ಈಗಲೂ ದೇಶದ ಗಡಿಯಲ್ಲಿ ಪರಕೀಯರು ಆಕ್ರಮಣ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಇದಕ್ಕಿಂತ ಅಪಾಯಕಾರಿಯಾಗಿ ದೇಶದಲ್ಲಿ ಭ್ರಷ್ಟಾಚಾರದ ಆಕ್ರಮಣ ದಿನೇ ದಿನೆ ಹೆಚ್ಚುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ವಿಷಾದಿಸಿದರು.
ಪಟ್ಟಣದ ಡಾ.ರಾಜ್ ಬಾನಂಗಳದಲ್ಲಿ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡುತಿದ್ದು, ಮೊರಾರ್ಜಿ ವಸತಿ ಶಾಲೆ, ಸ್ನಾತಕ್ಕೋತ್ತರ ಪದವಿ, ಮಹಿಳಾ ಹಾಸ್ಟೆಲ್ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ರಸ್ತೆಗಳ ಅಭಿವೃದ್ಧಿ, ನಾಲೆಗಳ ಹೂಳೆತ್ತುವಿಕೆ, ಶಾಲಾಕಾಲೇಜು ಹಾಸ್ಟೆಲ್‌ಗಳಿಗೆ ನೂತನ ಕಟ್ಟಡಗಳು, 13 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಶಾಲಾಮಕ್ಕಳಿಗೆ ಕಳೆದ 13 ವರ್ಷಗಳಿಂದ ಸಾ.ರಾ.ಸ್ನೇಹ ಬಳಗದ ವತಿಯಿಂದ ನೋಟ್ ಪುಸ್ತಕಗಳನ್ನು ಹಂಚಲಾಗುತ್ತಿದೆ. ಸ್ವಾತಂತ್ರ್ಯೊ ತ್ಸವದಂದು 32 ಸಾವಿರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಲಾಡು ವಿತರಿಸಲಾಗುತ್ತಿದೆ. ಈ ತಿಂಗಳ 26,27 ಅಥವಾ ಮುಂದಿನ ತಿಂಗಳ 2, 3ರಂದು ತಾಲೂಕಿನ ಚುಂಚನಕಟ್ಟೆಯಲ್ಲಿ ಜಲಪಾತೋತ್ಸವ ಆಯೋಜಿಸಲಾಗಿದ್ದು, ಚಿತ್ರನಟರಾದ ರಾಧಿಕಾ ಪಂಡಿತ್ ಮತ್ತು ಯಶ್ ಹಾಗೂ ಸಾಧು ಕೋಕಿಲ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ್ವಾತಂತ್ರ್ಯಹೋರಾಟಗಾರರಾದ ಲಕ್ಕಯ್ಯ, ನಂಜುಂಡಪ್ಪ ಮತ್ತು ಸತ್ಯಮೂರ್ತಿ ಪರವಾಗಿ ಮೊಮ್ಮಗ ಶರಣ್‌ರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಜಿ.ಎಚ್.ನಾಗರಾಜ್, ತಾಪಂ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಪುರಸಭಾ ಅಧ್ಯಕ್ಷೆ ಕವಿತಾವಿಜಯಕುಮಾರ್, ಬಿಇಒ ರೇವಣ್ಣ, ಕಾರ್ಯ ನಿರ್ವಹಣಾಧಿಕಾರಿ ಚಂದ್ರು, ಮಾಜಿ ವಿಧಾನಪರಿಷತ್ ಸದಸ್ಯ ಟಿ.ಕೆ.ಚಿನ್ನಸ್ವಾಮಿ ಇತರರು ಇದ್ದರು. ಸೇಂಟ್ ಜೋಸೆಫ್ ಕಾನ್ವೆಂಟ್, ಸಾಯಿ ನಳಂದ ವಿದ್ಯಾಸಂಸ್ಥೆ, ಲಯನ್ಸ್ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.