Advertisement

ಕಚೇರಿ ಉಳಿಸಿಕೊಳ್ಳಲು ಜನಪ್ರತಿನಿಧಿಗಳ ಮೇಲೆ ಹೆಚ್ಚಿದ ಒತ್ತಡ

11:53 PM Sep 05, 2020 | mahesh |

ಉಡುಪಿ: ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಮಂಗಳೂರಿನಲ್ಲಿಯೇ ಉಳಿಸಿಕೊಳ್ಳುವಂತೆ ಉಭಯ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳು ಮತ್ತು ತೆರಿಗೆ ದಾರರು ಜನಪ್ರತಿ ನಿಧಿ ಗಳ ಮೇಲೆ ಭಾರೀ ಒತ್ತಡ ಹೇರುತ್ತಿದ್ದಾರೆ.

Advertisement

ಮಂಗಳೂರಿನ ಪಿಸಿಐಟಿ ಕೇಂದ್ರ ಸ್ವಂತ ಕಟ್ಟಡವನ್ನು ಹೊಂದಿದೆ. ಜತೆಗೆ ಇದರ ವ್ಯಾಪ್ತಿಯಲ್ಲಿ 4 ಲಕ್ಷ ಮಂದಿ ತೆರಿಗೆ ಪಾವತಿದಾರರಿದ್ದು, ವಾರ್ಷಿಕ 3,300 ಕೋ.ರೂ. ತೆರಿಗೆ ಸಂಗ್ರಹಿಸುತ್ತಿದೆ. ಈ ಮೂಲಕ ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕಚೇರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ ದೇಶದ ಪ್ರತಿಷ್ಠಿತ ಮೀನುಗಾರಿಕೆ ಬಂದರು, ವೈದ್ಯಕೀಯ ಶಿಕ್ಷಣ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕ್‌, ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಒಂದು ಪಿಸಿಐಟಿ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಮಾನದಂಡ ಮತ್ತು ಅರ್ಹತೆ ಮಂಗಳೂರಿನ ಪಿಸಿಐಟಿ ಕೇಂದ್ರಕ್ಕೆ ಇದೆ. ಹೀಗಿರುವಾಗ ಪಿಸಿಐಟಿ ಕೇಂದ್ರವು ಗೋವಾದೊಂದಿಗೆ ವಿಲೀನವಾಗುವುದನ್ನು ತಡೆಯಲು ಜನಪ್ರತಿನಿಧಿಗಳಿಗೆ ಏಕೆ ಸಾಧ್ಯವಾಗದು ಎಂಬುದು ತೆರಿಗೆದಾರರ ಪ್ರಶ್ನೆ.

ಸಂಘಗಳಿಂದ ಮನವಿ
ಅವಳಿ ಜಿಲ್ಲೆಗಳ ಕೆನರಾ ಚೇಂಬರ್‌ ಆಫ್ ಕಾಮರ್ಸ್‌ ಮತ್ತು ಅಖೀಲ ಭಾರತೀಯ ಲೆಕ್ಕ ಪರಿಶೋಧಕ ಸಂಘದ ಜಿಲ್ಲಾ ಶಾಖೆಗಳು ಮತ್ತು ಇತರ ಸಂಘಟನೆಗಳು ಮಂಗಳೂರಿನಲ್ಲಿಯೇ ಪಿಸಿಐಟಿ ಕಚೇರಿಯನ್ನು ಉಳಿಸಿಕೊಳ್ಳಲು ಸಂಸದರು, ಕೇಂದ್ರ ಮತ್ತು ರಾಜ್ಯ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ.  ಕೈಗಾರಿಕೆ, ಬ್ಯಾಂಕಿಂಗ್‌ ಸಂಸ್ಥೆಗಳಿಗೆ ಅಗತ್ಯವೆನಿಸಿರುವ ಪಿಸಿಐಟಿ ಕಚೇರಿಯನ್ನು ಉಳಿಸಿಕೊಳ್ಳುವಂತೆ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಜನರು ಒತ್ತಡ ಹೇರುತ್ತಿದ್ದಾರೆ.

ಕೈಗೂಡುವುದೇ ಜನಪ್ರತಿನಿಧಿಗಳ ಭರವಸೆ?
ಕಚೇರಿಯನ್ನು ಮಂಗಳೂರಿನಲ್ಲಿಯೇ ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ಹಣಕಾಸು ಸಚಿವೆಗೆ ಪತ್ರ ಬರೆದಿರುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದು, ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸುವೆನೆಂದಿದ್ದಾರೆ. ಕಚೇರಿಯನ್ನು ಗೋವಾದೊಂದಿಗೆ ವಿಲೀನಗೊಳಿಸಬಾರದು ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಅವರೂ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಪಿಸಿಐಟಿ ಮಂಗಳೂರು ಕಚೇರಿ ಉಳಿಸಿಕೊಳ್ಳುವ ಕುರಿತು ಈಗಾಗಲೇ ಹಣಕಾಸು ಸಚಿವರೊಂದಿಗೆ ಮಾತನಾಡಿದ್ದೇನೆ.
-ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ

Advertisement

ಪಿಸಿಐಟಿ ಕಚೇರಿಯನ್ನು ಮಂಗಳೂರಿನಲ್ಲೇ ಉಳಿಸಿ ಕೊಳ್ಳಲು ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದೇನೆ. ಕೇಂದ್ರವನ್ನು ನಮ್ಮಲ್ಲಿ ಉಳಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡುವೆ.
ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲೆ ಉಸ್ತುವಾರಿ ಸಚಿವ

ಅವಳಿ ಜಿಲ್ಲೆಯಲ್ಲಿ ಸಾಕಷ್ಟು ಸಣ್ಣ ಕೈಗಾರಿಕೆ ಸಂಸ್ಥೆಗಳಿವೆ. ಗೋವಾಕ್ಕೆ ಹೋಲಿಸಿದರೆ ಮಂಗಳೂರಿನಲ್ಲಿ ನಾಲ್ಕು ಪಟ್ಟು ಹೆಚ್ಚು ತೆರಿಗೆದಾರರಿದ್ದಾರೆ. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪಿಸಿಐಟಿ ಕಚೇರಿ ಗೋವಾಕ್ಕೆ ಸ್ಥಳಾಂತರಿಸಿದರೆ ಸಣ್ಣ ಕೈಗಾರಿಕೆ ತೆರಿಗೆದಾರರಿಗೆ ಸೇರಿದಂತೆ ಸಾರ್ವಜನಿಕರಿಗೂ ಸಮಸ್ಯೆಯಾಗುವುದು ಖಂಡಿತ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪಿಸಿಐಟಿ ಕಚೇರಿಯನ್ನು ನಮ್ಮಲ್ಲಿ ಉಳಿಸಿಕೊಳ್ಳಲು ಹೋರಾಟ ನಡೆಸಬೇಕು.
– ಅಜಿತ್‌ ಕಾಮತ್‌, ಐ.ಆರ್‌. ಫೆರ್ನಾಂಡಿಸ್‌ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು, ದ.ಕ.,ಉಡುಪಿ

ಶೀಘ್ರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ, ಮಂಗಳೂರಿನಲ್ಲಿ ಪಿಸಿಐಟಿ ಕಚೇರಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಈ ಕೇಂದ್ರವನ್ನು ಗೋವಾದೊಂದಿಗೆ ವಿಲೀನ ಮಾಡಿದರೆ ಸುಮಾರು 4 ಲಕ್ಷ ತೆರಿಗೆದಾರರಿಗೆ ಸಮಸ್ಯೆ ಆಗಲಿದೆ. -ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಅಭಿಪ್ರಾಯ ತಿಳಿಸಿ
ಬೆಂಗಳೂರು ಬಳಿಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನಲ್ಲಿ ಪಿಸಿಐಟಿ ಕೇಂದ್ರವನ್ನು ಉಳಿಸುವಂತೆ ಒತ್ತಡ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಓದುಗರೂ ತಮ್ಮ ಅಭಿಪ್ರಾಯ ಕಳುಹಿಸಬಹುದು. ಅಭಿಪ್ರಾಯವನ್ನು ಚುಟುಕಾಗಿ ಬರೆದು ನಿಮ್ಮ ಹೆಸರು, ಊರು, ತಾಲೂಕು ನಮೂದಿಸಿ ನಿಮ್ಮದೊಂದು ಭಾವಚಿತ್ರ ಸಹಿತ ಕಳುಹಿಸಿಕೊಡಿ.
ವಾಟ್ಸ್‌ಆ್ಯಪ್‌: 9148594259

Advertisement

Udayavani is now on Telegram. Click here to join our channel and stay updated with the latest news.

Next