ದಾವಣಗೆರೆ: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ವೀರಶೈವ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಹೇಳಿದ್ದಾರೆ. ಶುಕ್ರವಾರ ಸಮಾಜದ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಘಟಕ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಒಬ್ಬ ಮಹಿಳೆ ವಿದ್ಯಾವಂತರಾದರೆ ಇಡೀ ಕುಟುಂಬವೇ ವಿದ್ಯೆ ಕಲಿತಂತಾಗುತ್ತದೆ. ಮಹಿಳೆಯರು ಒಳ್ಳೆಯ ವಿದ್ಯಾವಂತರಾಗಬೇಕು. ಕಾನೂನು ಅರಿವು ಸಹ ಪಡೆಯಬೇಕಿದೆ ಎಂದರು. ನಮ್ಮದು ಪುರುಷ ಪ್ರಧಾನ ಸಮಾಜವಾದರೂ ಹಿಂದಿನಿಂದಲೂ ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ, ಗೌರವ, ಅಪಾರ ಮನ್ನಣೆ ನೀಡುತ್ತಲೇ ಬರಲಾಗುತ್ತಿದೆ.
ಈಗ ಸರ್ಕಾರಗಳು ಸಹ ಅತಿ ಹೆಚ್ಚಿನ ಅವಕಾಶ, ಸವಲತ್ತು ಕಲ್ಪಿಸುತ್ತಿವೆ. ಆ ಸೌಲಭ್ಯ ಸದ್ಬಳಕೆಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆ, ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಆದರೆ, ಮಹಿಳೆಗೆ ಮಹಿಳೆಯೇ ಶತ್ರು ಎಂಬ ಮಾತಿದೆ. ಮನೆಗೆ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು. ಪೀÅತಿ, ವಿಶ್ವಾಸ, ಅನೋನ್ಯತೆಯ ಜೀವನ ನಡೆಸಬೇಕು. ಮಹಿಳೆ ಸಂಸಾರದ ಕಣ್ಣು ಎಂಬ ಮಾತನ್ನು ನಿಜವಾಗಿಸಬೇಕು ಎಂದು ತಿಳಿಸಿದರು. ಮೇಯರ್ ರೇಖಾ ನಾಗರಾಜ್ ಮಾತನಾಡಿ, ಮಾ. 8ಕ್ಕೆ ಮಾತ್ರವೇ ಮಹಿಳಾ ದಿನಾಚರಣೆ ಸೀಮಿತವಾಗಬಾರದು.
ಪ್ರತಿ ದಿನ ನಡೆಯುವಂತಾಗಬೇಕು. ಮನೆಯ ಒಳಗೆ ಮತ್ತು ಹೊರಗೆ ಅತಿ ಸಮರ್ಥವಾಗಿ ಕೆಲಸ ಮಾಡುಜವ ಮಹಿಳೆಯರಿಗೆ ಹೆಚ್ಚಿನ ಗೌರವ, ನಿರ್ಧಾರಕ್ಕೆ ಬೆಲೆ ದೊರೆಯಬೇಕು ಎಂದು ಆಶಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ನಾಗರಾಜ್ ಕುಂಕೋದ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಘಟಕದ ಅಧ್ಯಕ್ಷೆ, ನಿವೃತ್ತ ಶಿಕ್ಷಕಿ ನೀಲಗುಂದ ಜಯಮ್ಮ ಪ್ರಾಸ್ತಾವಿಕ ಮಾತುಗಳಾಡಿದರು. ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್, ಬಾದಾಮಿ ಕರಿಬಸಪ್ಪ, ವಸಂತಾ ಹುಲ್ಮನೆ, ವೀಣಾ ಕೊಟ್ರೇಗೌಡ ಇತರರು ಇದ್ದರು.