Advertisement

ಹೊರಗಿನಿಂದ ಬಂದವರಿಂದಲೇ ಸೋಂಕು ಹೆಚ್ಚಳ

07:30 AM May 21, 2020 | Lakshmi GovindaRaj |

ಬೆಂಗಳೂರು: ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದವರಲ್ಲಿ ಕೋವಿಡ್‌ 19 ಸೋಂಕು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬುಧವಾರ ರಾಜ್ಯದಲ್ಲಿ 67 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 52 ಮಂದಿ ಹೊರರಾಜ್ಯಗಳಿಂದ  ಬಂದವರು. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರೊಬ್ಬರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 1,462ಕ್ಕೆ ಮತ್ತು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

Advertisement

ಬೆಂಗಳೂರು ನಗರ ನಿವಾಸಿ  43 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈತ ತಮಿಳುನಾಡಿನ ವೆಲ್ಲೂರಿನಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಸೋಮವಾರವಷ್ಟೇ ಸೋಂಕು ದೃಢಪಟ್ಟಿದ್ದು, ಕೋವಿಡ್‌ 19 ಚಿಕಿತ್ಸೆಗೆ ನಿಗದಿ ಪಡಿಸಿದ್ದ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ರಕ್ತದೊತ್ತಡ, ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬುಧವಾರ ಚಿಕಿತ್ಸೆ ಫ‌ಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದ 10 ಜಿಲ್ಲೆಗಳಲ್ಲಿ  ಮಂಗಳವಾರ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಹಾಸನ, ಮಂಡ್ಯ, ಕಲಬುರಗಿ, ಉಡುಪಿ, ತುಮಕೂರು, ಬೀದರ್‌ನಲ್ಲಿ ಹೊರರಾಜ್ಯದಿಂದ ಬಂದು ಜಿಲ್ಲಾ ಕ್ವಾರಂಟೈನ್‌ನಲ್ಲಿದ್ದ ವಲಸೆ  ಕಾರ್ಮಿಕರಲ್ಲಿ  ಸೋಂಕು ಪತ್ತೆಯಾಗಿದೆ. ಈ ಎಲ್ಲಾ ಸೋಂಕಿತರನ್ನು ಆಯಾ ಜಿಲ್ಲಾ ನಿಗದಿತ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬೀದರ್‌ನಲ್ಲಿ ತಬ್ಲೀ ಗಳಿಂದ ಸೋಂಕು: ಬೀದರ್‌ನಲ್ಲಿ 10 ಸೋಂಕು ಪ್ರಕರಣಗಳು ವರದಿಯಾಗಿದ್ದು, ಬಹುತೇಕರು ತಬ್ಲೀ  ಸಂಪರ್ಕಿತರು ಎಂದು ಮೂಲಗಳು ತಿಳಿಸಿವೆ. ಸೋಂಕಿತರಲ್ಲಿ ಮೂವರು ಮಕ್ಕಳು, ಮಹಿಳೆಯರು, ಪುರುಷರು,  ಒಬ್ಬ ವೃದ್ಧರು ಇದ್ದಾರೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, 44 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

13 ಮಂದಿ ಗುಣಮುಖ: ಸೋಂಕಿತರ ಪೈಕಿ ಧಾರವಾಡದಲ್ಲಿ ಇಬ್ಬರು, ದಾವಣಗೆರೆಯಲ್ಲಿ  ಏಳು ಮಂದಿ, ಮಂಡ್ಯದಲ್ಲಿ ಮೂವರು, ಬೆಂಗಳೂರು ನಗರದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಈವರೆಗೂ ರಾಜ್ಯದಲ್ಲಿ 556 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿಗೆ ದೆಹಲಿಯಿಂದ ರಾಜಧಾನಿ ಎಕ್ಸ್‌ ಪ್ರಸ್‌ ರೈಲು ಬುಧವಾರ  ಬಂದಿದ್ದು, 180 ಮಂದಿ ಆಗಮಿಸಿದ್ದಾರೆ. ಎಲ್ಲರ ಪ್ರಾಥಮಿಕ ತಪಾಸಣೆ ನಡೆಸಿ ಕ್ವಾರಂಟೈನ್‌ ಮಾಡಲಾಗಿದೆ.

Advertisement

ರಾಜ್ಯದಲ್ಲಿ ಈಗಾಗಲೇ 46 ಕೋವಿಡ್‌ 19 ಸೋಂಕು ಪರೀಕ್ಷಾ ಪ್ರಯೋಗಾಲಯಗಳಿದ್ದು, ಕೇಂದ್ರ ಸರ್ಕಾರ ಮತ್ತೆ ರಾಜ್ಯದ 4  ಪ್ರಯೋಗಾಲಯ ಗಳಿಗೆ ಸೋಂಕು ಪರೀಕ್ಷೆಗೆ ಅನುಮತಿ ನೀಡಿದೆ. ಕಂಟೈ ನ್ಮೆಂಟ್‌ ಝೋನ್‌ನಲ್ಲಿ ಸಂಚರಿ ಸುವ ವಾಹನಗಳನ್ನು ಕಡ್ಡಾಯವಾಗಿ ರಾಸಾಯನಿಕ ಬಳಸಿ ಸ್ಪತ್ಛತೆ ನಡೆಸಬೇಕು. ರಾಜ್ಯದಲ್ಲಿ 63 ಲಕ್ಷ ಮಂದಿ ಆರೋಗ್ಯ ಸೇತು  ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದು, ಬೆಂಗಳೂರಿ ನಲ್ಲಿಯೇ 28 ಲಕ್ಷ ಬಳಕೆದಾರರಿದ್ದಾರೆ ಎಂದು ಸಚಿವ ಸುರೇಶ್‌  ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಸನದಲ್ಲಿ 21 ಮಂದಿಗೆ ಸೋಂಕು: ಮಂಗಳವಾರ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವುದು ಹಾಸನ ಜಿಲ್ಲೆಯಲ್ಲಿ. ಏಳು ಮಕ್ಕಳು ಸೇರಿ 21 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಎಲ್ಲಾ ಸೋಂಕಿತರು ಮುಂಬೈ  ನಗರಕ್ಕೆ ವಲಸೆ ಹೋಗಿದ್ದವರು. ಸದ್ಯ ಹಾಸನ ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ವಿವಿಧ ನಗರಗಳಿಂದ ಬಂದ ಕಲಬುರಗಿಯ ಏಳು  ಮಂದಿಗೆ, ಉಡುಪಿಯ ಆರು ಮಂದಿಗೆ, ತುಮಕೂರು, ರಾಯಚೂರಿನ ತಲಾ ನಾಲ್ಕು ಮಂದಿಗೆ ಸೋಂಕು ತಗುಲಿದೆ.

ಬುಧವಾರ ಜಿಲ್ಲಾವಾರು ಸೋಂಕಿತರು/ ಸೋಂಕಿನ ಹಿನ್ನೆಲೆ
* ಹಾಸನ -21. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ಬೀದರ್‌ -10. ಎಲ್ಲಾ ಸೋಂಕಿತರ ಸಂಪರ್ಕ ಹಿನ್ನೆಲೆ.
* ಮಂಡ್ಯ – 8. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ಕಲಬುರಗಿ -7. ಮುಂಬೈ ಸೇರಿ ಮಹಾರಾಷ್ಟ್ರದ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ.
* ಉಡುಪಿ – 6. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ಬೆಂಗಳೂರು -4. ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ, ಮತ್ತಿಬ್ಬರ ಸೋಂಕು ಹಿನ್ನೆಲೆ ಪತ್ತೆ ಮಾಡಲಾಗುತ್ತಿದೆ.
* ತುಮಕೂರು – 4. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ರಾಯಚೂರು -4. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ಉತ್ತರ ಕನ್ನಡ – ಸೊಲ್ಲಾಪುರ ಪ್ರಯಾಣ ಹಿನ್ನೆಲೆ.
* ದಕ್ಷಿಣ ಕನ್ನಡ – ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ.
* ಯಾದಗಿರಿ – 1. ಮುಂಬೈ ಪ್ರಯಾಣ ಹಿನ್ನೆಲೆ.
* ಒಟ್ಟು – 67. ( ಹೊರರಾಜ್ಯ ಪ್ರಯಾಣ ಹಿನ್ನೆಲೆ – 52, 12 ಸೋಂಕಿತ ಸಂಪರ್ಕ, ಇಬ್ಬರ ಸೊಂಕು ಹಿನ್ನೆಲೆ ಪತ್ತೆ ಮಾಡಲಾಗುತ್ತಿದೆ. ಒಬ್ಬರು ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ.)

Advertisement

Udayavani is now on Telegram. Click here to join our channel and stay updated with the latest news.

Next